ಭಾರತದ ಗುಣಗಾನ ಮಾಡಿದ ನವಾಝ್ ಶರೀಫ್
‘‘ನೆರೆಯ ದೇಶಗಳು ಚಂದ್ರನನ್ನೂ ತಲುಪಿವೆ, ಪಾಕ್ ಗೆ ನೆಲದಿಂದಲೇ ಏಳಲು ಸಾಧ್ಯವಾಗುತ್ತಿಲ್ಲ’’
ನವಾಝ್ ಶರೀಫ್ \ Photo : PTI
ಇಸ್ಲಾಮಾಬಾದ್: ಭಾರತವನ್ನು ಮತ್ತೊಮ್ಮೆ ಪ್ರಶಂಸಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್, ‘‘ನೆರೆಹೊರೆಯ ರಾಷ್ಟ್ರಗಳು ಚಂದ್ರನೆಡೆಗೂ ತಲುಪಿವೆ. ಆದರೆ ಪಾಕಿಸ್ತಾನಕ್ಕೆ ಇನ್ನೂ ಕೂಡಾ ನೆಲದಿಂದಲೇ ಎದ್ದೇಳಲು ಸಾಧ್ಯವಾಗುತ್ತಿಲ್ಲ’’ ಎಂದು ಹೇಳಿದೆ.
ಇಸ್ಲಾಮಾಬಾದ್ ನಲ್ಲಿ ಬುಧವಾರ ಪಿಎಂಎಲ್-ಎನ್ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ದೇಶದ ಶೋಚನೀಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಗಮನಸೆಳೆದ ಅವರು, ಪಾಕಿಸ್ತಾನದ ಅಧಃಪತನಕ್ಕೆ ಸ್ವತಃ ಅದೇ ಕಾರಣವಾಗಿದೆ. ಇದು ಹೀಗೆಯೇ ಮುಂದುವರಿಯಕೂಡದು ಎಂದು ಶರೀಫ್ ತಿಳಿಸಿದರು.
ನಮ್ಮ ಪತನಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಇಲ್ಲದೆ ಇದ್ದಲ್ಲಿ, ಈ ದೇಶವು ಬೇರೆಯದ್ದೇ ಆದ ಸ್ಥಾನದಲ್ಲಿರುತ್ತಿತ್ತು ಎಂದವರು ಹೇಳಿದ್ದಾರೆ.
‘‘2013ರಲ್ಲಿ ನಾವು ವಿದ್ಯುತ್ ಲೋಡ್ ಶೆಡ್ಡಿಂಗ್ ತೀವ್ರ ಅಭಾವವನ್ನು ಎದುರಿಸುತ್ತಿದ್ದೆು ನಾವು ಅಧಿಕಾರಕ್ಕೇರಿದ ಬಳಿಕ ಅದಕ್ಕೆ ಕೊನೆಹಾಡಿದ್ದೇವೆ. ದೇಶಾದ್ಯಂತ ಭಯೋತ್ಪಾದನೆಯನ್ನು ಅಂತ್ಯಗೊಳಿಸಿದ್ದೆವು. ಕರಾಚಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ್ದೇವು. ಹೆದ್ದಾರಿಗಳನ್ನು ನಿರ್ಮಿಸಿದ್ದೆವು. ಚೀನಾ ಪಾಕ್ ಕಾರಿಡಾರ್ ಯೋಜನೆಯ ಆಗಮನವಾಯಿತು ಹಾಗೂ ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಯುಗ ಆರಂಭವಾಯಿತು’’ ಎಂದು ಶರೀಫ್ ಹೇಳಿದರು.
‘‘ಪಾಕಿಸ್ತಾನದ ಎದುರಿಸುತ್ತಿರುವ ಹಾಲಿ ಪರಿಸ್ಥಿತಿಗೆ ಯಾರನ್ನು ದೂಷಿಸಬೇಕಾಗಿದೆ ಎಂಬುದನ್ನು ನೀವೇ ಹೇಳಿ’’ ಎಂದು ಜನತೆಯನ್ನು ಪ್ರಶ್ನಿಸಿದ ಅವರು, ‘‘ನಮ್ಮ ಕಾಲಿಗೆ ನಾವೇ ಗುಂಡಿಕ್ಕಿದ್ದೇವೆ ’’ಎಂದರು.
2014ರಲ್ಲಿ ತನ್ನ ಸರಕಾರದ ಆಡಳಿತದಲ್ಲಿ ಹಣದುಬ್ಬರವು ಅತ್ಯಂತ ಕೆಳಮಟ್ಟದಲ್ಲಿತ್ತು. ಆಗ ಇಸ್ಲಾಮಾಬಾದ್ ನ ಆಬ್ಪಾರಾದಲ್ಲಿ 2 ಪಾಕ್ ರೂ.ಗೆ ದೊರೆಯುತ್ತಿದ್ದ ರೋಟಿಯು ಈಗ 30 ಪಾಕ್ ರೂ.ಗೆ ತಲುಪಿದೆ ಎಂದರು.
ತನ್ನ ವಿರುದ್ಧ ಹಾಗೂ ತನ್ನ ಪುತ್ರಿ ಮರಿಯಂ ಹಾಗೂ ಇತರ ಪಿಎಂಎಲ್-ಎನ್ ನಾಯಕರ ವಿರುದ್ಧ ನಕಲಿ ಪ್ರಕರಣಗಳು ದಾಖಲಾಗಿದ್ದವು. ತನ್ನನ್ನು ಅಪರಾಧಿಯೆಂದು ಪರಿಗಣಿಸಿದ್ದ ಎರಡು ಪ್ರಕರಣಗಳನ್ನು ನ್ಯಾಯಾಲಯವು ಕೇವಲ ಮೂರು ಆಲಿಕೆಗಳಲ್ಲಿ ರದ್ದುಪಡಿಸಿದೆ ಎಂದರು.