ಪಾಕ್ಗೆ ನವಾಝ್ ಶರೀಫ್ ಪುನರಾಗಮನ: ನಾಲ್ಕು ವರ್ಷಗಳ ಸ್ವಘೋಷಿತ ದೇಶತ್ಯಾಗ ಅಂತ್ಯ
Photo: twitter.com/SHO855136
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಶನಿವಾರ ಸ್ವದೇಶಕ್ಕೆ ವಾಪಾಸಾಗಿದ್ದಾರೆ. ಅವರು ದುಬೈನಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು ಇಸ್ಲಾಮಾಬಾದ್ನಲ್ಲಿರುವ ತನ್ನ ನಿವಾಸಕ್ಕೆ ತೆರಳಿದರು. ಇದರೊಂದಿಗೆ ಶರೀಫ್ ಅವರ ನಾಲ್ಕು ವರ್ಷಗಳ ಸ್ವಘೋಷಿತ ದೇಶತ್ಯಾಗ ಕೊನೆಗೊಂಡಂತಾಗಿದೆ. ಲಂಡನ್ನಲ್ಲಿ ನೆಲೆಸಿದ್ದ ಶರೀಫ್ ಅವರು ಜನವರಿಯಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಚುನಾವಣಾ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ.
ಶನಿವಾರದಂದು ಪಾಕಿಸ್ತಾನಕ್ಕೆ ಆಗಮಿಸಿದ ಬೆನ್ನಲ್ಲೇ ಶರೀಫ್ ಅವರು ಲಾಹೋರ್ನಲ್ಲಿ ಪಕ್ಷದ ಬೃಹತ್ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದರು. ಪಾಕಿಸ್ತಾನದಲ್ಲಿ ತೀವ್ರ ರಾಜಕೀಯ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಶರೀಫ್ ಅವರ ಪುನರಾಗಮನವು ಆ ದೇಶದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಕಳೆದ ವಾರ ಲಂಡನ್ನಿಂದ ಪ್ರಯಾಣಿಸಿದ್ದ ಅವರು ಸೌದಿ ಆರೇಬಿಯದಲ್ಲಿ ತಂಗಿದ್ದರು. ಶುಕ್ರವಾರದಂದು ಯುಎಇಗೆ ಆಗಮಿಸಿದ್ದರು. ಅಲ್ಲಿಂದ ಅವರು ಶನಿವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ.
ಇಸ್ಲಾಮಾಬಾದ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತನ್ನ ಅನುಪಸ್ಥಿತಿಯಲ್ಲಿ ದೇಶದ ಪರಿಸ್ಥಿತಿ ಉತ್ತಮಗೊಂಡೀತೆಂದು ಹಾರೈಸಿದ್ದೆ. ಆದರೆ ಅದು ಹುಸಿಯಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ಸ್ಥಿತಿ ಇವೆರಡೂ ಕುಸಿದಿವೆ ಎಂಬ ಶರೀಫ್ ಭಾಷಣದ ವೀಡಿಯೊಗಳನ್ನು, ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್), ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಸಾರ ಮಾಡಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಶರೀಫ್ ಅವರಿಗೆ 2018ರಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಲಂಡನ್ನಲ್ಲಿ ಐಶಾರಾಮಿ ಅಪಾರ್ಟ್ಮೆಂಟ್ಗಳ ಖರೀದಿ ಸೇರಿದಂತೆ ವ್ಯಾಪಕ ಭ್ರಷ್ಟಾಚಾರಗಳನ್ನು ಎಸಗಿದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು. 2019ರಲ್ಲಿ ಹೃದಯದ ಶಸ್ತ್ರಕ್ರಿಯೆಗಾಗಿ ಲಂಡನ್ಗೆ ತೆರಳಲು ಅವರಿಗೆ ಆಗಿನ ಇಮ್ರಾನ್ ಖಾನ್ಸರಕಾರವು ಅನುಮತಿ ನೀಡಿತ್ತು. ಲಂಡನ್ನಲ್ಲಿ ದೀರ್ಘಕಾಲ ವಾಸ್ತವ್ಯವಿದ್ದ ಶರೀಫ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತನಗೆ ವೈದ್ಯರು ಪ್ರಯಾಣಿಸುವುದಕ್ಕೆ ಅನುಮತಿ ನೀಡುತ್ತಿಲ್ಲವೆಂದು ಕಾರಣ ನೀಡಿ, ಅಲ್ಲಿಯೇ ಉಳಿದುಪಕೊಂಡಿದ್ದರು.