ಉತ್ತರ ಸಿರಿಯದಲ್ಲಿ ಕುರ್ದಿಶ್, ಟರ್ಕಿ ಬೆಂಬಲಿತ ಪಡೆಗಳ ನಡುವೆ ಭೀಕರ ಕಾಳಗ | ಕನಿಷ್ಠ 37 ಮಂದಿ ಮೃತ್ಯು
PC / AFP
ದಮಾಸ್ಕಸ್: ಉತ್ತರ ಸಿರಿಯದ ಮನ್ಬಿಜ್ ಪ್ರಾಂತದಲ್ಲಿ ಟರ್ಕಿ ಬೆಂಬಲಿತ ಸಶಸ್ತ್ರ ಗುಂಪುಗಳು ಹಾಗೂ ಕುರ್ದಿಶ್ ಪಡೆಗಳ ನಡುವೆ ಗುರುವಾರ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆಂದು ಯುದ್ಧ ನಿಗಾವಣೆ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಕುರ್ದಿಶ್ ಹೋರಾಟಗಾರರ ಜೊತೆಗಿನ ಸಂಘರ್ಷವನ್ನು ತೀವ್ರಗೊಳಿಸದಂತೆ ನ್ಯಾಟೊದ ಸದಸ್ಯರಾಷ್ಟ್ರವಾದ ಟರ್ಕಿಯ ಮನವೊಲಿಸಲು ತಾನು ಶ್ರಮಿಸುವುದಾಗಿ ಅಮೆರಿಕವು ಹೇಳಿಕೆ ನೀಡಿದ ಹೊರತಾಗಿಯೂ ಈ ಭೀಕರ ಕದನ ನಡೆದಿದೆ.
‘‘ಮನ್ಬಿಜ್ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಕೆಲವು ತಾಸುಗಳಿಂದ ಕುರ್ದಿಶ್ ನೇತೃತ್ವದ ಸಿರಿಯನ್ ಪ್ರಜಾತಾಂತ್ರಿಕ ಪಡೆಗಳು ಹಾಗೂ ಟರ್ಕಿ ಬೆಂಬಲಿತ ರಾಷ್ಟ್ರೀಯ ಸೇನಾ ಗುಂಪುಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಟರ್ಕಿ ಸೇನೆಯು ವಾಯುದಾಳಿಯನ್ನು ನಡೆಸುವ ಮೂಲಕ ಅದು ಬೆಂಬಲಿಸುತ್ತಿರುವ ಪಡೆಗಳಿಗೆ ನೆರವಾಗುತ್ತಿದೆ ಎಂದು ‘ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ತಿಳಿಸಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಟರ್ಕಿ ಬೆಂಬಲಿತ ಹೋರಾಟಗಾರರಾಗಿದ್ದಾರೆ. ಕದನದಲ್ಲಿ ಆರು ಮಂದಿ ಎಸ್ಡಿಎಫ್ ಹೋರಾಟಗಾರರು ಕೂಡಾ ಸಾವನ್ನಪ್ಪಿರುವುದಾಗಿ ಅದು ಹೇಳಿದೆ.
ಅಮೆರಿಕ ಬೆಂಬಲಿತ ಎಸ್ಡಿಎಫ್ ಗುಂಪಿನ ವರಿಷ್ಠ ಮಝ್ಲೂಮ್ ಅಬ್ದಿ ಅವರು ಬುಧವಾರ ಹೇಳಿಕೆಯೊಂದನ್ನು ನೀಡಿ, ಸಿರಿಯ ಪ್ರಾಂತದ ಏಕತೆ ಹಾಗೂ ಸಮಗ್ರತೆಯನ್ನು ತನ್ನ ಗುಂಪು ಬೆಂಬಲಿಸುತ್ತದೆ. ಸಿರಿಯಾದ ಉದ್ದಗಲಕ್ಕೂ ಕದನವಿರಾಮವೇರ್ಪಡುವಂತೆ ಸಿರಿಯದ ನೂತನ ಆಡಳಿತವು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.