ಸೌದಿ-ಇರಾನ್ ಮುಖ್ಯಸ್ಥರ ನಡುವೆ ಮಾತುಕತೆ: ಫೆಲೆಸ್ತೀನ್ ವಿರುದ್ಧ ಯುದ್ಧಾಪರಾಧಗಳು ನಿಲ್ಲಬೇಕು ಎಂದ ಸೌದಿ ಯುವರಾಜ
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ರಿಯಾದ್: ಚೀನಾ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳು ಮತ್ತೆ ಪುನಃಸ್ಥಾಪನೆಗೊಂಡ ನಂತರದ ಅವಧಿಯಲ್ಲಿ ಎರಡೂ ದೇಶಗಳ ಮುಖ್ಯಸ್ಥರ ನಡುವೆ ಬುಧವಾರ ನಡೆದ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಫೆಲೆಸ್ತೀನಿ-ಇಸ್ರೇಲ್ ಸಂಘರ್ಷದ ವಿಚಾರ ಚರ್ಚೆಗೆ ಬಂದಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಡುವೆ ನಡೆದ ದೂರವಾಣಿ ಮಾತುಕತೆಯ ವೇಳೆ ಫೆಲೆಸ್ತೀನ್ ವಿರುದ್ಧ ನಡೆಯುತ್ತಿರುವ ಯುದ್ಧಾಪರಾಧಗಳು ನಿಲ್ಲಬೇಕು ಎಂದು ಸೌದಿ ರಾಜಕುಮಾರ ಒತ್ತಿ ಹೇಳಿದ್ದಾರೆಂದು ಇರಾನ್ ಸರ್ಕಾರಿ ಮಾಧ್ಯಮ ಏಜನ್ಸಿ SPA ವರದಿ ಮಾಡಿದೆ.
ಈಗಿನ ಸಂಘರ್ಷ ಸ್ಥಿತಿಯನ್ನು ದೂರ ಮಾಡಲು ಎಲ್ಲಾ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳೊಂದಿಗೆ ಸೌದಿ ಶ್ರಮಿಸುತ್ತಿದೆ ಎಂದು ಸೌದಿ ಯುವರಾಜ ಹೇಳಿದ್ದಾರೆಂದು ವರದಿ ತಿಳಿಸಿದೆ. ಇಂತಹ ಸಂಘರ್ಷದ ವೇಳೆ ಜನಸಾಮಾನ್ಯರನ್ನು ಗುರಿಯಾಗಿಸುವುದನ್ನು ಸೌದಿ ಒಪ್ಪುವುದಿಲ್ಲ ಎಂದೂ ಅವರು ತಿಳಿಸಿದ್ಧಾರೆ.
ಸೌದಿ ಮತ್ತು ಇರಾನ್ ಏಳು ವರ್ಷಗಳ ಅಂತರದ ನಂತರ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ತಮ್ಮ ಸಂಬಂಧವನ್ನು ಪುನರ್ ಸ್ಥಾಪಿಸಿದ್ದವು. ಎರಡೂ ದೇಶಗಳ ನಡುವಿನ ಮನಸ್ತಾಪವು ಗಲ್ಫ್ ಪ್ರಾಂತ್ಯದಲ್ಲಿ ಅಸ್ಥಿರತೆ ಸೃಷ್ಟಿಯ ಆತಂಕದ ನಡುವೆ ಮಧ್ಯ ಪೂರ್ವ ದೇಶಗಳಲ್ಲಿ ಇಂಧನ ಸಂಬಂಧಿತ ಸಮಸ್ಯೆಯ ಉದ್ಭವದ ಹಿನ್ನೆಲೆಯಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಿತ್ತು.