ನೇಪಾಳ: ಹಿಂಸಾಚಾರದ ಬಗ್ಗೆ ತನಿಖೆಗೆ ಆದೇಶ; 100ಕ್ಕೂ ಅಧಿಕ ಮಂದಿ ಬಂಧನ

PC - ndtv.com
ಕಠ್ಮಂಡು: ನೇಪಾಳದಲ್ಲಿ ರಾಜಪ್ರಭುತ್ವದ ಪರ ರ್ಯಾಲಿಯ ಸಂದರ್ಭ ನಡೆದ ಹಿಂಸಾಚಾರದ ಬಗ್ಗೆ ಸರಕಾರ ತನಿಖೆ ನಡೆಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಶನಿವಾರ ಹೇಳಿದ್ದಾರೆ.
ರಾಜಪ್ರಭುತ್ವವನ್ನು ಮರುಸ್ಥಾಪಿಸಲು ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು 77 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 112 ಮಂದಿ ಗಾಯಗೊಂಡಿದ್ದರು. ರಾಜಧಾನಿ ಕಠ್ಮಂಡುವಿನಲ್ಲಿ ಸಂಸತ್ ಭವನದತ್ತ ರ್ಯಾಲಿ ನಡೆಸುತ್ತಿದ್ದ ಗುಂಪೊಂದು ಕಲ್ಲೆಸೆತಕ್ಕೆ ತೊಡಗಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದರು. ಪ್ರತಿಭಟನಾಕಾರರು ಹಲವು ಮನೆಗಳು, ಅಂಗಡಿಗಳು, ಆಸ್ಪತ್ರೆ, ರಾಜಕೀಯ ಪಕ್ಷದ ಕಚೇರಿ, ವಾಹನಗಳು ಹಾಗೂ ಶಾಪಿಂಗ್ ಮಾಲ್ ಅನ್ನು ಧ್ವಂಸಗೊಳಿಸಿದ್ದು ಪೊಲೀಸರ ಕೈಯಿಂದ ಆಯುಧಗಳನ್ನು ಕಿತ್ತುಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಗಲಭೆಗೆ ಸಂಬಂಧಿಸಿ 105 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. `ಇದು ವಿಧ್ವಂಸಕತೆ, ಅಗ್ನಿಸ್ಪರ್ಷ, ಲೂಟಿ ಮತ್ತು ಅರಾಜಕತೆ. ಇದು ಪ್ರತಿಭಟನೆಯಾಗಲು ಸಾಧ್ಯವಿಲ್ಲ' ಎಂದು ಸಚಿವ ಸಂಪುಟದ ವಕ್ತಾರರೂ ಆಗಿರುವ ಪೃಥ್ವಿ ಸುಬ್ಬ ಗುರುಂಗ್ ಹೇಳಿದ್ದಾರೆ.
ಮಾವೋವಾದಿ ಮಾಜಿ ಬಂಡುಕೋರರೊಂದಿಗೆ ಒಪ್ಪಂದದ ಭಾಗವಾಗಿ ನೇಪಾಳದಲ್ಲಿ 239 ವರ್ಷದಿಂದ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವವನ್ನು 2008ರಲ್ಲಿ ವಿಶೇಷವಾಗಿ ಚುನಾಯಿತವಾದ ಸಭೆ ರದ್ದುಗೊಳಿಸಿದೆ. ಕೊನೆಯ ದೊರೆ, 77 ವರ್ಷದ ಗ್ಯಾನೇಂದ್ರ ಈಗ ಕಠ್ಮಂಡುವಿನಲ್ಲಿ ತನ್ನ ಕುಟುಂಬದ ಜತೆ ಖಾಸಗಿ ಮನೆಯಲ್ಲಿ ಸಾಮಾನ್ಯ ಪ್ರಜೆಯಂತೆ ಜೀವನ ನಡೆಸುತ್ತಿದ್ದಾರೆ.