ನೇಪಾಳ: ರಾಜಪ್ರಭುತ್ವ ಪರ ರ್ಯಾಲಿಯಲ್ಲಿ ಆದಿತ್ಯನಾಥ್ ಫೋಟೋ ಪ್ರದರ್ಶನ

Photo Credit | X/@TimesAlgebraIND
ಕಠ್ಮಂಡು: ನೇಪಾಳದ ಮಾಜಿ ದೊರೆ ಗ್ಯಾನೇಂದ್ರ ಶಾ ಅವರನ್ನು ಸ್ವಾಗತಿಸಲು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಫೋಟೋ ಪ್ರದರ್ಶಿಸಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ನೇಪಾಳದ ವಿವಿಧ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿದ 77 ವರ್ಷದ ಗ್ಯಾನೇಂದ್ರ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಪ್ರಜಾಪ್ರಭುತ್ವ ಪರ ಪಕ್ಷವಾದ `ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ'(ಆರ್ಪಿಪಿ)ಯ ನಾಯಕರ ಸಹಿತ ಹಲವರು ಸೇರಿದ್ದು ಗ್ಯಾನೇಂದ್ರ ಪರ ಘೋಷಣೆ ಕೂಗಿದರು. ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸಲು ಬೆಂಬಲ ಸೂಚಿಸುವ ಸಲುವಾಗಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ರ್ಯಾಲಿಯಲ್ಲಿ ಗ್ಯಾನೇಂದ್ರ ಅವರ ಫೋಟೊದ ಜತೆ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ನಾಯಕ ಆದಿತ್ಯನಾಥರ ಫೋಟೋವನ್ನೂ ಪ್ರದರ್ಶಿಸಲಾಗಿದೆ. ಈ ಬಗ್ಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾದ ಬಳಿಕ ಹೇಳಿಕೆ ನೀಡಿರುವ ಆರ್ಪಿಪಿ ವಕ್ತಾರ ಗ್ಯಾನೇಂದ್ರ ಶಾಹಿ `ಪ್ರಜಾಪ್ರಭುತ್ವ ಪರ ಅಭಿಯಾನಕ್ಕೆ ಕೆಟ್ಟ ಹೆಸರು ತರಲು ಪ್ರಧಾನಿ ಕೆಪಿ ಒಲಿ ನೇತೃತ್ವದ ಸರಕಾರದ ಮುಖ್ಯ ಸಲಹೆಗಾರ ಬಿಷ್ಣು ರಿಮಲ್ ಸೂಚನೆಯಂತೆ ಆದಿತ್ಯನಾಥ್ ಫೋಟೋ ಪ್ರದರ್ಶಿಸಲಾಗಿದೆ' ಎಂದು ಆರೋಪಿಸಿದ್ದಾರೆ.
ಗ್ಯಾನೇಂದ್ರ ಶಾ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ.