ನೇಪಾಳ | ನದಿಗೆ ಬಸ್ಸು ಉರುಳಿ 7 ಭಾರತೀಯರ ಮೃತ್ಯು
PC : NDTV
ಕಠ್ಮಂಡು : ನಿರಂತರ ಮಳೆಯಿಂದ ತತ್ತರಿಸಿರುವ ನೇಪಾಳದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತದಿಂದಾಗಿ ಎರಡು ಬಸ್ಸುಗಳು ನದಿಗೆ ಉರುಳಿಬಿದ್ದು 7 ಭಾರತೀಯರು ಮೃತಪಟ್ಟಿದ್ದಾರೆ. ಎರಡೂ ಬಸ್ಸುಗಳಲ್ಲಿ 65 ಪ್ರಯಾಣಿಕರಿದ್ದು ನಾಪತ್ತೆಯಾಗಿರುವವರ ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ವಿಕೋಪದಿಂದ ತಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಸ್ಸು ನದಿಗೆ ಉರುಳುತ್ತಿದ್ದ ಸಂದರ್ಭದಲ್ಲಿ ಬಸ್ಸಿನಿಂದ ಹೊರಗೆ ಹಾರಿದ ಮೂವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಿತ್ವಾನ್ ಜಿಲ್ಲೆಯ ಸಿಮಾಲ್ತಲ್ ಪ್ರದೇಶದ ನಾರಾಯಣ ಘಾಟ್-ಮುಗ್ಲಿಂಗ್ ರಸ್ತೆಯ ಬದಿ ಕುಸಿದ ಕಾರಣ ರಸ್ತೆಯಲ್ಲಿ ಸಾಗುತ್ತಿದ್ದ ಎರಡು ಬಸ್ಸುಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತ್ರಿಶೂಲಿ ನದಿಗೆ ಉರುಳಿ ಬಿದ್ದಿವೆ. ಬೀರ್ಗಂದಜ್ನಿಂಳದ ಕಠ್ಮಂಡುವಿಗೆ ಸಾಗುತ್ತಿದ್ದ ಬಸ್ಸಿನಲ್ಲಿದ್ದ 7 ಭಾರತೀಯರೂ ಸಾವನ್ನಪ್ಪಿದ್ದಾರೆ.
ಮತ್ತೊಂದು ಬಸ್ಸಿನಲ್ಲಿ ಸುಮಾರು 58 ಮಂದಿಯಿದ್ದು ಅವರ ಪತ್ತೆ ಕಾರ್ಯಕ್ಕೆ ನಿರಂತರ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತ ಅಡ್ಡಿಯಾಗಿದೆ. ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಘಾಟ್- ಕಠ್ಮಂಡು ರಸ್ತೆಯಲ್ಲಿ 15 ದಿನ ವಾಹನ ಸಂಚಾರ ನಿಷೇಧಿಸಿದ್ದರು. ಆದರೂ ಕೆಲವು ವಾಹನಗಳು ಈ ರಸ್ತೆಯನ್ನು ಬಳಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡೂ ಬಸ್ಸುಗಳು ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಭೂಕುಸಿತ ಸಂಭವಿಸಿದೆ. ಚಾಲಕರ ಸಹಿತ ಒಟ್ಟು 65 ಮಂದಿ ನೀರಿಗೆ ಬಿದ್ದಿದ್ದಾರೆ. ನದಿಯಲ್ಲಿ ಮುಳುಗಿರುವ ಬಸ್ಸುಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಚಿತ್ವಾನ್ ಜಿಲ್ಲಾಧಿಕಾರಿ ಇಂದ್ರದೇವ್ ಯಾದವ್ರೆನ್ನು ಉಲ್ಲೇಖಿಸಿ ಎಎನ್ಐಹ ಸುದ್ಧಿಸಂಸ್ಥೆ ವರದಿ ಮಾಡಿದೆ.