ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನೇಪಾಳ, ಚೀನಾ ಒಪ್ಪಂದ
File Photo
ಚೀನಾ : ವ್ಯಾಪಾರ, ರಸ್ತೆಸಂಪರ್ಕ, ಮಾಹಿತಿ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಗಳನ್ನು ಹೆಚ್ಚಿಸಲು ಚೀನಾ ಮತ್ತು ನೇಪಾಳದ ನಡುವೆ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಕ್ರೀಡಾಕೂಟದ ನೇಪಥ್ಯದಲ್ಲಿ ನೇಪಾಳದ ಪ್ರಧಾನಿ ಪುಷ್ಪಕಮಲ್ `ಪ್ರಚಂಡ' ಮತ್ತು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನಡುವೆ ನಡೆದ ಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರವಾಗಿ ಪರಿಶೀಲಿಸಿದರು ಮತ್ತು ಉಭಯ ದೇಶಗಳ ನಡುವೆ ನಿಕಟ ಮತ್ತು ಸೌಹಾರ್ದಯುತ ಬಾಂಧವ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಎಂದು ಬೀಜಿಂಗ್ನಲ್ಲಿರುವ ನೇಪಾಳದ ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಾಗೂ ಕ್ರೋಢೀಕರಿಸುವ ಮಾರ್ಗಗಳ ಕುರಿತು, ಆರ್ಥಿಕತೆ, ವ್ಯಾಪಾರ ಮತ್ತು ಜನರಿಂದ ಜನರ ನಡುವಿನ ಸಂಪರ್ಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ವಿಷಯದಲ್ಲಿ ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ದ್ವಿಪಕ್ಷೀಯ ಮಾತುಕತೆಯ ಬಳಿಕ ಉಭಯ ದೇಶಗಳ ನಡುವೆ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಹೇಳಿಕೆ ತಿಳಿಸಿದೆ.