ನೇಪಾಳ ಪ್ರವಾಹ | ಮೃತರ ಸಂಖ್ಯೆ 224ಕ್ಕೆ ಏರಿಕೆ
PTI PHOTO
ಕಠ್ಮಂಡು : ಇತ್ತೀಚೆಗೆ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ 224 ಮಂದಿ ಸಾವನ್ನಪ್ಪಿರುವುದು ಇದುವರೆಗೆ ದೃಢಪಟ್ಟಿದೆ. 126 ಮಂದಿ ಗಾಯಗೊಂಡಿದ್ದು 29 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ 30,700 ಸಿಬ್ಬಂದಿಯನ್ನು ಬಳಸಲಾಗಿದ್ದು ಸುಮಾರು 4,331 ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 17 ಶತಕೋಟಿ ರೂಪಾಯಿ(ನೇಪಾಳ ಕರೆನ್ಸಿ) ನಷ್ಟ ಸಂಭವಿಸಿರುವುದಾಗಿ ಅಂದಾಜು ಮಾಡಲಾಗಿದೆ ಎಂದು ಸರಕಾರ ಮುಖ್ಯ ಕಾರ್ಯದರ್ಶಿ ನಾರಾಯಣ ಅರ್ಯಾಲ್ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ ವಿದೇಶಿ ಚಾರಣಿಗರ ಸಹಿತ ಸುಮಾರು 900 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪರ್ವತ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಪ್ರವಾಸಿಗರನ್ನು ರಕ್ಷಿಸಲು ಬಾಡಿಗೆ ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಕಳೆದ ಗುರುವಾರ ಆರಂಭಗೊಂಡ ಮಳೆ ನಿರಂತರ ಮೂರು ದಿನ ಸುರಿದು ಪ್ರವಾಹ, ಭೂಕುಸಿತ ಉಂಟಾದ ಕಾರಣ ದೇಶದ ಹಲವು ಭಾಗಗಳು ಜಲಾವೃತಗೊಂಡಿವೆ. ರವಿವಾರ ಮಳೆ ಕಡಿಮೆಯಾದರೂ ಮಧ್ಯ ಮತ್ತು ಪೂರ್ವ ನೇಪಾಳದ ಹಲವು ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆ.