ನೇಪಾಳ: ಹೊಸ ಮೈತ್ರಿ ಸರಕಾರ ರಚನೆ
ನೇಪಾಳ: ನೇಪಾಳದಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷದ ಮೈತ್ರಿ ಸರಕಾರ ಪತನಗೊಂಡಿದ್ದು ಹೊಸ ಮೈತ್ರಿ ಸರಕಾರ ರಚಿಸಲಾಗಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಸಿಪಿಎನ್-ಮಾವೋವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್- ಯುನಿಫೈಡ್ ಮಾಕ್ರ್ಸಿಸ್ಟ್ ಲೆನಿನಿಸ್ಟ್(ಸಿಪಿಎನ್-ಯುಎಂಎಲ್), ರಾಷ್ಟ್ರೀಯ ಸ್ವತಂತ್ರ ಪಾರ್ಟಿ ಮತ್ತು ಜನತಾ ಸಮಾಜವಾದಿ ಪಾರ್ಟಿ ಒಟ್ಟು ಸೇರಿ ಮೈತ್ರಿ ಸರಕಾರ ರಚಿಸಿದ್ದು ಪ್ರಧಾನಿಯಾಗಿ ಪುಷ್ಪಕುಮಾರ್ ದಹಾಲ್ `ಪ್ರಚಂಡ' ಅವರೇ ಮುಂದುವರಿಯಲಿದ್ದಾರೆ. ನೂತನ ಸಚಿವ ಸಂಪುಟವನ್ನು ಶೀಘ್ರವೇ ರಚಿಸಲಾಗುವುದು ಎಂದು ಮಾಜಿ ವಿತ್ತಸಚಿವ ಸುರೇಂದ್ರ ಪಾಂಡೆ ಹೇಳಿದ್ದಾರೆ. ನೂತನ ಸಚಿವರ ಪಟ್ಟಿಯನ್ನು ನಾಲ್ಕೂ ಪಕ್ಷಗಳು ಅನುಮೋದಿಸಿದ ಬಳಿಕ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. 2022ರ ಸಾರ್ವತ್ರಿಕ ಚುನಾವಣೆಯ ಬಳಿಕ ಸಿಪಿಎನ್, ಯುಎಂಎಲ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿಯಾದ ದಹಾಲ್, ಮೂರು ತಿಂಗಳೊಳಗೆ ನೇಪಾಳಿ ಕಾಂಗ್ರೆಸ್ ಪಕ್ಷದ ಜತೆ ಮೈತ್ರಿಮಾಡಿಕೊಂಡು ನೂತನ ಮೈತ್ರಿ ಸರಕಾರ ರಚಿಸಿದ್ದರು. ಇದೀಗ ಸುಮಾರು 1 ವರ್ಷದ ಬಳಿಕ ಮತ್ತೆ ಸಿಪಿಎನ್, ಯುಎಂಎಲ್ ಪಕ್ಷಗಳ ಜತೆ ಸೇರಿ ಮೈತ್ರಿ ಸರಕಾರ ರಚಿಸಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕದ ವಿಷಯದಲ್ಲಿ ಸಿಪಿಎನ್ ಮತ್ತು ನೇಪಾಳಿ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಎರಡೂ ಪಕ್ಷಗಳು ಈ ಹುದ್ದೆಗಾಗಿ ಪಟ್ಟು ಹಿಡಿದಿದ್ದವು. ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 7 ಅಂತಿಮ ದಿನವಾಗಿದ್ದು ಮಾರ್ಚ್ 12ರಂದು ಚುನಾವಣೆ ನಡೆಯಲಿದೆ.