ನೇಪಾಳ ಪ್ರಧಾನಿಗೆ ವಿಶ್ವಾಸಮತದಲ್ಲಿ ಸೋಲು
ಪುಷ್ಪಕಮಲ ದಹಾಲ್ | PC : PTI
ಕಠ್ಮಂಡು : ನೇಪಾಳ ಪ್ರಧಾನಿ ಪುಷ್ಪಕಮಲ ದಹಾಲ್ `ಪ್ರಚಂಡ' ಶುಕ್ರವಾರ ಸಂಸತ್ನೂಲ್ಲಿ ವಿಶ್ವಾಸಮತ ಗೆಲ್ಲಲು ವಿಫಲವಾಗಿರುವುದಾಗಿ ವರದಿಯಾಗಿದೆ.
275 ಸದಸ್ಯರ ಸಂಸತ್ನಿಲ್ಲಿ ವಿಶ್ವಾಸ ಮತ ಗಳಿಸಲು 138 ಮತಗಳ ಅಗತ್ಯವಿತ್ತು. ಆದರೆ `ಪ್ರಚಂಡ' 63 ಮತ ಗಳಿಸಲಷ್ಟೇ ಶಕ್ತರಾದರು. ಪ್ರಚಂಡ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ನೇಪಾಳ ಕಮ್ಯುನಿಸ್ಟ್ ಪಾರ್ಟಿ(ಯುಎಂಎಲ್) ವಾಪಸ್ ಪಡೆದುಕೊಂಡ ಬಳಿಕ ಸರಕಾರ ಬಹುಮತ ಕಳೆದುಕೊಂಡಿತ್ತು. 19 ತಿಂಗಳು ಅಧಿಕಾರದಲ್ಲಿದ್ದ ಪ್ರಚಂಡ ಇದೀಗ ಪದತ್ಯಾಗ ಮಾಡಬೇಕಾಗಿದ್ದು, ಕಮ್ಯುನಿಸ್ಟ್ ಪಕ್ಷದ ಮುಖಂಡ ಖಡ್ಗ ಪ್ರಸಾದ್ ಒಲಿ ನೂತನ ಪ್ರಧಾನಿಯಾಗಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
2022ರ ಡಿಸೆಂಬರ್ ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪ್ರಚಂಡ ಅವರ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದರೂ ಇತರ ಪಕ್ಷಗಳ ಜತೆ ಮೈತ್ರಿಮಾಡಿಕೊಂಡು ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದರು. ಆ ಬಳಿಕ ನಾಲ್ಕು ಬಾರಿ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ್ದರೂ ಐದನೇ ಪ್ರಯತ್ನದಲ್ಲಿ ಸೋಲುಂಡಿದ್ದಾರೆ.