ರಫಾ ಕಾರ್ಯಾಚರಣೆ ನಿಲ್ಲಿಸಲು ನೆತನ್ಯಾಹು ನಕಾರ
ಬೆಂಜಮಿನ್ ನೆತನ್ಯಾಹು | Photo: NDTV
ಟೆಲ್ಅವೀವ್: ದಕ್ಷಿಣ ಗಾಝಾದ ರಫಾ ನಗರದಲ್ಲಿ ಉದ್ದೇಶಿತ ಪದಾತಿ ದಳದ ಆಕ್ರಮಣ ಯೋಜನೆಯನ್ನು ಕೈಬಿಡುವಂತೆ ಅಮೆರಿಕ ನೀಡಿದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಇದರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಮಧ್ಯಪ್ರಾಚ್ಯ ಪ್ರವಾಸ ಉದ್ದೇಶಿತ ಗುರಿ ಸಾಧಿಸಲು ವಿಫಲವಾಗಿದೆ.
ಸ್ಥಳಾಂತರಗೊಂಡ ಫೆಲೆಸ್ತೀನೀಯರು ಕಿಕ್ಕಿರಿದು ತುಂಬಿರುವ ರಫಾದಲ್ಲಿ ಉದ್ದೇಶಿತ ಕಾರ್ಯಾಚರಣೆ ಕೈಬಿಡುವಂತೆ ಅಮೆರಿಕದ ಆಗ್ರಹವನ್ನು ನೆತನ್ಯಾಹು ತಿರಸ್ಕರಿಸಿರುವುದು ಮುಂದಿನ ವಾರ ವಾಷಿಂಗ್ಟನ್ನಲ್ಲಿ ಅಮೆರಿಕ ಮತ್ತು ಇಸ್ರೇಲ್ನ ನಿಯೋಗದ ನಡುವೆ ನಿಗದಿಯಾಗಿರುವ ಉನ್ನತ ಮಟ್ಟದ ಸಭೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅಗತ್ಯ ಬಿದ್ದರೆ ರಫಾದಲ್ಲಿ ಏಕಾಂಗಿಯಾಗಿ ಕಾರ್ಯಾಚರಣೆಗೂ ಇಸ್ರೇಲ್ ಹಿಂಜರಿಯುವುದಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ಗೆ ಅಮೆರಿಕ ರಾಜತಾಂತ್ರಿಕ ಮತ್ತು ಮಿಲಿಟರಿ ನೆರವು ಒದಗಿಸುತ್ತಿದೆ.
ಗಾಝಾದಲ್ಲಿ ಉಳಿದಿರುವ ಹಮಾಸ್ನ ಅಂತಿಮ ಭದ್ರಕೋಟೆ ಆಗಿರುವ ರಫಾದಲ್ಲಿ ಹಮಾಸ್ ಗುಂಪನ್ನು ಸೋಲಿಸುವವರೆಗೆ ತನ್ನ ಯುದ್ಧದ ಉದ್ದೇಶ ಈಡೇರುವುದಿಲ್ಲ ಎಂದು ಇಸ್ರೇಲ್ ಹೇಳುತ್ತಿದೆ. ಆದರೆ ಗಾಝಾದ ಇತರೆಡೆ ಇಸ್ರೇಲ್ನ ಕಾರ್ಯಾಚರಣೆಯ ಬಳಿಕ ನೆಲೆ ಕಳೆದುಕೊಂಡಿರುವ ಸುಮಾರು 1 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರು ಈಗ ರಫಾದಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಇಸ್ರೇಲ್ನ ಪದಾತಿ ದಳದ ಕಾರ್ಯಾಚರಣೆಯು ನಾಗರಿಕರ ಜೀವವನ್ನು ಅಪಾಯಕ್ಕೆ ದೂಡುವ ಜತೆಗೆ, ಈ ಪ್ರದೇಶಕ್ಕೆ ಮಾನವೀಯ ನೆರವು ಪೂರೈಕೆಗೂ ಅಡ್ಡಿಯಾಗಲಿದೆ ಎಂದು ಅಮೆರಿಕ ಹಾಗೂ ಇತರ ಬಹುತೇಕ ದೇಶಗಳು ಕಳವಳ ವ್ಯಕ್ತಪಡಿಸಿವೆ.
ರಫಾದಲ್ಲಿ ಯುದ್ಧವಲಯದಿಂದ ನಾಗರಿಕರನ್ನು ಸ್ಥಳಾಂತರಿಸಿ, ಮಾನವೀಯ ನೆರವು ಪೂರೈಕೆಗೆ ಅಡ್ಡಿಯಾಗದಂತೆ ಹಮಾಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸುತ್ತೇವೆ. ಹಮಾಸ್ ಸೋಲಿಸುವ ನಮ್ಮ ಸಂಕಲ್ಪ ಈಡೇರಲು ರಫಾ ಕಾರ್ಯಾಚರಣೆ ಅನಿವಾರ್ಯವಾಗಿದೆ. ಈ ಕಾರ್ಯಕ್ಕೆ ಅಮೆರಿಕದ ನೆರವನ್ನು ನಿರೀಕ್ಷಿಸಿದ್ದೇವೆ. ಆದರೆ ಅಗತ್ಯಬಿದ್ದರೆ ಏಕಾಂಗಿಯಾಗಿ ಮಾಡಲೂ ನಾವು ಸಿದ್ಧರಿದ್ದೇವೆ ಎಂಬುದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ' ಎಂದು ನೆತನ್ಯಾಹು ಹೇಳಿದ್ದಾರೆ.