ಟ್ರಂಪ್ ಅವರ ಗಾಝಾ ಯೋಜನೆ `ಕ್ರಾಂತಿಕಾರಿ': ನೆತನ್ಯಾಹು ಶ್ಲಾಘನೆ

ಬೆಂಜಮಿನ್ ನೆತನ್ಯಾಹು | PC : PTI
ಜೆರುಸಲೇಂ: ಗಾಝಾವನ್ನು ಅಮೆರಿಕ ನಿಯಂತ್ರಿಸುವ ಮತ್ತು ಅಲ್ಲಿನ ಜನಸಂಖ್ಯೆಯನ್ನು ಸ್ಥಳಾಂತರಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಕ್ರಾಂತಿಕಾರಿ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿದ್ದ ನೆತನ್ಯಾಹು ಜತೆ ಸಭೆ ನಡೆಸಿದ ಬಳಿಕ ಟ್ರಂಪ್ `ಗಾಝಾ ಪಟ್ಟಿಯನ್ನು ಅಮೆರಿಕ ನಿಯಂತ್ರಿಸಬೇಕು ಮತ್ತು ಅದರ ನಿವಾಸಿಗಳನ್ನು ಸ್ಥಳಾಂತರಿಸಬೇಕು' ಎಂದು ನೀಡಿದ್ದ ಹೇಳಿಕೆ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇಸ್ರೇಲ್ಗೆ ಹಿಂತಿರುಗಿದ ಬಳಿಕ ಸಚಿವ ಸಂಪುಟದ ಸಭೆಯಲ್ಲಿ ಮಾತನಾಡಿದ ನೆತನ್ಯಾಹು ` ಹಮಾಸ್ ವಿರುದ್ಧದ 15 ತಿಂಗಳ ಯುದ್ಧದ ಆರಂಭದಲ್ಲಿ ಇಸ್ರೇಲ್ ನಿಗದಿಪಡಿಸಿದ್ದ ಯುದ್ಧದ ಗುರಿಗಳ ಬಗ್ಗೆ ( ಗಾಝಾವು ಇನ್ನು ಮುಂದೆ ಇಸ್ರೇಲ್ಗೆ ಬೆದರಿಕೆ ಹಾಕುವುದಿಲ್ಲ ಎಂಬುದನ್ನು ಖಚಿತಪಡಿಸುವುದು ಸೇರಿದಂತೆ) ಎರಡೂ ಮಿತ್ರದೇಶಗಳು ಸಮ್ಮತಿಸಿವೆ. ಅಧ್ಯಕ್ಷ ಟ್ರಂಪ್ ಅವರು ಇಸ್ರೇಲ್ ಗಾಗಿ ಸಂಪೂರ್ಣ ವಿಭಿನ್ನ, ಉತ್ತಮ ಪರಿಕಲ್ಪನೆಯನ್ನು ಹೊಂದಿದ್ದಾರೆ. ಅವರು ಮುಂದಿರಿಸಿದ ಕ್ರಾಂತಿಕಾರಿ, ಸೃಜನಶೀಲ ವಿಧಾನದ ಬಗ್ಗೆ ನಾವು ಪ್ರಸ್ತುತ ಚರ್ಚಿಸುತ್ತಿದ್ದೇವೆ. ಅದನ್ನು ಜಾರಿಗೊಳಿಸಲು ಅವರು ದೃಢನಿರ್ಧಾರ ಮಾಡಿದ್ದಾರೆ ಮತ್ತು ಇದು ನಮಗೆ ಹಲವು ಸಾಧ್ಯತೆಗಳನ್ನು ತೆರೆದಿಡುವ ವಿಶ್ವಾಸವಿದೆ. ಟ್ರಂಪ್ ಅವರೊಂದಿಗಿನ ಭೇಟಿ ಮತ್ತು ಅವರೊಂದಿಗೆ ನಡೆಸಿದ ಮಾತುಕತೆಗಳು ಹಲವು ತಲೆಮಾರುಗಳವರೆಗೆ ಇಸ್ರೇಲ್ನ ಭದ್ರತೆಯನ್ನು ಖಚಿತಪಡಿಸುತ್ತದೆ' ಎಂದು ಹೇಳಿದ್ದಾರೆ.