ಇಸ್ರೇಲ್ ಪ್ರಧಾನಿ, ಸಚಿವರಿಗೆ ಐಸಿಸಿ ವಾರಂಟ್ ಭೀತಿ | ನೆತನ್ಯಾಹು ಕಚೇರಿಯಿಂದ ತುರ್ತು ಸಭೆ
ಬೆಂಜಮಿನ್ ನೆತನ್ಯಾಹು | PC : PTI
ಟೆಲ್ ಅವೀವ್: ಗಾಝಾದಲ್ಲಿ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವ ಕಾರಣಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇನ್ನಿತರ ಇಸ್ರೇಲ್ ರಾಜಕೀಯ ಮತ್ತು ಸೇನಾಪಡೆ ನಾಯಕರಿಗೆ ಹೇಗ್ ನಲ್ಲಿನ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಬಂಧನದ ವಾರಂಟ್ ಹೊರಡಿಸಬಹುದು ಎಂಬ ಕುರಿತು ಇಸ್ರೇಲ್ ನಲ್ಲಿ ಆತಂಕ ಹೆಚ್ಚುತ್ತಿದೆ ಎಂದು ಇಸ್ರೇಲ್ ಸುದ್ದಿ ವಾಹಿನಿಯೊಂದು ವರದಿ ಗುರುವಾರ ವರದಿ ಮಾಡಿದೆ.
Channel 12 news ಸುದ್ದಿ ಸಂಸ್ಥೆಯ ಪ್ರಕಾರ, ಪ್ರಬಲ ವಾರಂಟ್ ಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬ ಕುರಿತು ಮಂಗಳವಾರ ಹಲವಾರು ಸರಕಾರಿ ಕಾನೂನು ತಜ್ಞರು ತುರ್ತು ಮಾತುಕತೆಯನ್ನು ಹಮ್ಮಿಕೊಂಡಿದ್ದರು ಎಂದು ಹೇಳಲಾಗಿದೆ.
ಸದ್ಯದಲ್ಲೇ ಅಂತಹ ವಾರಂಟ್ ಗಳು ಜಾರಿಯಾಗಬಹುದು ಎಂದು ಸೂಚಿಸುವ ಸಂದೇಶಗಳನ್ನು ಜೆರುಸಲೇಂ ಸ್ವೀಕರಿಸಿದ ನಂತರ ಈ ಸಭೆ ನಡೆದಿದೆ ಎಂದು ಯಾವುದೇ ಮೂಲಗಳನ್ನು ಉಲ್ಲೇಖಿಸದೆ ವರದಿ ಮಾಡಲಾಗಿದೆ.
ಸಭೆ ನಡೆದಿರುವ ಕುರಿತು ಇಸ್ರೇಲ್ ನ ವಿದೇಶಾಂಗ ಸಚಿವ ಕಟ್ಝ್ ಕಚೇರಿಯು The Times Of Isreal ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದು, ಐಡಿಎಫ್ ಅಧಿಕಾರಿಗಳ ವಿರುದ್ಧ ವಾರಂಟ್ ಜಾರಿಯಾಗಲಿರುವ ಸಾಧ್ಯತೆಯ ಕುರಿತೂ ಚರ್ಚೆಗಳು ನಡೆದವು ಎಂದು ತಿಳಿಸಿದ್ದಾರೆ.
ಈ ವಾರ ಈ ವಿಷಯವನ್ನು ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮೆರಾನ್ ಹಾಗೂ ಜರ್ಮನಿಯ ವಿದೇಶಾಂಗ ಸಚಿವ ಅನ್ನಲೆನಾ ಬೇರ್ ಬಾಕ್ ರೊಂದಿಗಿನ ತಮ್ಮ ಸಭೆಗಳಲ್ಲಿ ಚರ್ಚಿಸಿರುವ ನೇತನ್ಯಾಹು ಅವರ ನೆರವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ಕಟ್ಝ್, ನ್ಯಾಯ ಸಚಿವ ಯಾರಿವ್ ಲೆವಿನ್ ಹಾಗೂ ಕಾರ್ಯತಂತ್ರ ವ್ಯವಹಾರಗಳ ಸಚಿವ ರಾನ್ ಡರ್ಮರ್ ಭಾಗವಹಿಸಿದ್ದ ಮಂಗಳವಾರದ ಸಭೆಯಲ್ಲಿ, ನ್ಯಾಯಾಲಯದ ಮೊರೆ ಹೋಗಿ, ಪ್ರಭಾವದೊಂದಿಗೆ ರಾಜತಾಂತ್ರಿಕ ಅಂಕಿಸಂಖ್ಯೆಯನ್ನು ಒದಗಿಸುವ ಮೂಲಕ ವಾರಂಟ್ ಜಾರಿಯಾಗುವುದನ್ನು ತಡೆಯಬೇಕು ಎಂದು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗಾಝಾ ಪಟ್ಟಿಯಲ್ಲಿ ಮುಂದುವರಿದಿರುವ ಕದನದಿಂದಾಗಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟು ಹಾಗೂ ಹಲವು ದೇಶಗಳು ಅಂತಾರಾಷ್ಟ್ರೀಯ ಕಾನೂನು ಹಾಗೂ ನಾಲ್ಕನೆ ಜಿನಿವಾ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಆರೋಪಿಸುತ್ತಿರುವುದರಿಂದ ಬಂಧನದ ವಾರಂಟ್ ಗಳ ಜಾರಿಗೆ ಮನವಿ ಮಾಡಬಹುದು ಎಂದು ಜೆರುಸಲೇಂ ಶಂಕೆ ವ್ಯಕ್ತಪಡಿಸಿದೆ.
ಫೆಬ್ರವರಿ ತಿಂಗಳಲ್ಲಿ, ಹಮಾಸ್ ನಿಂದ ಒತ್ತೆಯಾಳುಗಳಾಗಿರುವ ಸಂಬಂಧಿಕರ ನಿಯೋಗವೊಂದು ಹಮಾಸ್ ವಿರುದ್ಧ ಯುದ್ಧಾಪರಾಧದ ದೂರನ್ನು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಲ್ಲಿಕೆಯಾಗಿರುವ ಈ ಆರೋಪಗಳಲ್ಲಿ ಅಪಹರಣ, ಲೈಂಗಿಕ ಕಿರುಕುಳದ ಅಪರಾಧಗಳು, ಕಿರುಕುಳ ಮತ್ತು ಇನ್ನಿತರ ಗಂಭೀರ ಆರೋಪಗಳು ಸೇರಿವೆ.
ಐಸಿಸಿಯ ಆದೇಶಕ್ಕೆ ಇಸ್ರೇಲ್ ಬದ್ಧವಾಗದೆ ಇದ್ದುದರಿಂದ ನ್ಯಾಯಾಲಯದ ಮುಖ್ಯ ಪ್ರಾಸಿಕ್ಯೂಟರ್ ಆದ ಕರೀಮ್ ಖಾನ್ ಅವರು ಡಿಸೆಂಬರ್ ತಿಂಗಳಲ್ಲಿ ಇಸ್ರೇಲ್ ಗೆ ಅಧಿಕೃತ ಭೇಟಿ ನೀಡಿದ್ದರು. ಅಕ್ಟೋಬರ್ 7, 2023ರಂದು ಹಮಾಸ್ ದಾಳಿ ನಡೆಸಿದ್ದ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದ ಕರೀಮ್ ಖಾನ್, ಸಂತ್ರಸ್ತರ ಸಾಕ್ಷ್ಯಗಳನ್ನು ಆಲಿಸಿದ್ದರು. ಸಂತ್ರಸ್ತರ ಗುರುತಿನ ಕಾರಣಕ್ಕಾಗಿಯೇ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಅವರಿಗೆ ಮನವರಿಕೆಯಾಗಿತ್ತು. ನಂತರ ಅವರು “ನಾನು ಲೆಕ್ಕಾಚಾರದ ಕ್ರೌರ್ಯದ ಸನ್ನಿವೇಶಗಳಿಗೆ ಸಾಕ್ಷಿಯಾದೆ” ಎಂದು ಹೇಳಿಕೆ ನೀಡಿದ್ದರು.
ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಕೃತ್ಯಗಳ ಕುರಿತು ಮುಕ್ತ ತನಿಖೆ ನಡೆಸಲು ನಾನು ನ್ಯಾಯಾಲಯದ ಪ್ರಾಸಿಕ್ಯೂಟರ್ ಅವರೊಂದಿಗೆ ಕರ್ತವ್ಯಬದ್ಧನಾಗಿದ್ದೆ ಎಂದೂ ಹೇಳಿದ್ದರು.
2014ರಲ್ಲಿ ಸಂರಕ್ಷಿತ ತುದಿಯಲ್ಲಿನ ಇಸ್ರೇಲ್-ಹಮಾಸ್ ಸಂಘರ್ಷದ ಸಂದರ್ಭದಲ್ಲಿ ಎರಡೂ ದೇಶಗಳು ಎಸಗಿರುವ ಯುದ್ಧಾಪರಾಧಗಳು, ಇಸ್ರೇಲ್ ವಸಾಹತು ನೀತಿ ಹಾಗೂ ಗಾಝಾ ಗಡಿ ಬಳಿಯ ಪ್ರತಿಭಟನೆಗಳಿಗೆ ಇಸ್ರೇಲ್ ತೋರಿದ್ದ ಪ್ರತಿಕ್ರಿಯೆಯ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ 2019ರಲ್ಲಿ ಐಸಿಸಿ ಪ್ರಕಟಿಸಿತ್ತು. ಈ ತನಿಖೆಯು ಮಾರ್ಚ್ 3, 2021ರಂದು ಔಪಚಾರಿಕವಾಗಿ ಪ್ರಾರಂಭಗೊಂಡು, ಇಸ್ರೇಲ್ ನಿಂದ ಪ್ರಬಲವಾದ ಟೀಕೆಗೆ ಗುರಿಯಾಗಿತ್ತು.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯಲ್ಲಿ ಭಯೋತ್ಪಾದಕರು ಸುಮಾರು 1,200 ಮಂದಿಯನ್ನು ಹತ್ಯೆಗೈದಿದ್ದರು. ಈ ಪೈಕಿ ಬಹುತೇಕರು ಸಾಮಾನ್ಯ ನಾಗರಿಕರಾಗಿದ್ದರು. ಇದರೊಂದಿಗೆ ಎಲ್ಲ ವಯೋಮಾನದ 253 ಮಂದಿ ಪುರುಷರು, ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಿಸಿದ್ದರು.
ನವೆಂಬರ್ ಅಂತ್ಯದಲ್ಲಿ ನಡೆದ ವಾರಪೂರ್ತಿ ಕದನ ವಿರಾಮ ಸಂದರ್ಭದಲ್ಲಿ 105 ಮಂದಿ ನಾಗರಿಕರನ್ನು ಹಮಾಸ್ ವಶದಿಂದ ಪಾರು ಮಾಡಿದ ನಂತರವೂ ಇನ್ನೂ 129 ಮಂದಿ ಒತ್ತೆಯಾಳುಗಳು ಗಾಝಾದಲ್ಲೇ ಉಳಿದಿದ್ದು, ಈ ಪೈಕಿ ಎಲ್ಲರೂ ಜೀವಂತವಾಗಿಲ್ಲ ಎಂದು ನಂಬಲಾಗಿದೆ. ಇದಕ್ಕೂ ಮುನ್ನ ನಾಲ್ಕು ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮೂವರು ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಿದ್ದ ಇಸ್ರೇಲ್ ಸೇನಾ ಪಡೆಯು, ತಪ್ಪಾಗಿ ಹತ್ಯೆಗೈಯ್ಯಲಾಗಿದ್ದ ಮೂವರು ವ್ಯಕ್ತಿಗಳು ಸೇರಿದಂತೆ 12 ಮಂದಿ ಒತ್ತೆಯಾಳುಗಳ ಮೃತ ದೇಹಗಳನ್ನು ವಶಪಡಿಸಿಕೊಂಡಿದ್ದರು.
ಗಾಝಾದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ಪಡೆಗಳ ಹೊಸ ಗುಪ್ತಚರ ಮಾಹಿತಿ ಹಾಗೂ ಸತ್ಯ ಶೋಧನೆಯಿಂದ ಈಗಲೂ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಪೈಕಿ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಐಡಿಎಫ್ ದೃಢಪಡಿಸಿದೆ.
ಮತ್ತೊಬ್ಬ ವ್ಯಕ್ತಿ ಅಕ್ಟೋಬರ್ 7ರಿಂದ ನಾಪತ್ತೆಯಾಗಿದ್ದಾರೆ ಎಂದು ಪಟ್ಟಿ ಮಾಡಲಾಗಿದ್ದು, ಅವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಸೌಜನ್ಯ: timesofisreal.com