ಡಚ್ ತಾರಾ ಆಟಗಾರ ಪೌಲ್ ವ್ಯಾನ್ ಮೀಕೆರೆನ್ ರ ಹಳೆಯ ಟ್ವೀಟ್ ವೈರಲ್
ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ನೆದರ್ಲ್ಯಾಂಡ್ಸ್:
PHOTO : ESPN
ಧರ್ಮಶಾಲಾ: ಅಜೇಯರಾಗಿ ಉಳಿದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್ ಅಭಿಯಾನದಲ್ಲಿ ಅಚ್ಚರಿಯ ಗೆಲುವು ದಾಖಲಿಸಿರುವ ನೆದರ್ಲ್ಯಾಂಡ್ಸ್ ತಂಡ ವಿಶ್ವಕಪ್ ನಲ್ಲಿ ತನ್ನ ಚೊಚ್ಚಲ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ 43 ಓವರ್ ಗಳಲ್ಲಿ 245 ರನ್ ಗಳ ಗುರಿ ನೀಡಿದ್ದ ನೆದರ್ಲ್ಯಾಂಡ್ಸ್, ನಂತರ ದಕ್ಷಿಣ ಆಫ್ರಿಕಾ ತಂಡವನ್ನು 207 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ಅವರಿಗೆ ದೊಡ್ದ ಆಘಾತವನ್ನು ಉಂಟು ಮಾಡಿತ್ತು. ಈ ಗೆಲುವಿನಲ್ಲಿ ನಾಯಕ ಸ್ಕಾಟ್ ಎಡ್ವರ್ಡ್ಸ್, ವೇಗದ ಬೌಲರ್ ಲೋಗನ್ ವ್ಯಾನ್ ಬೀಕ್ ಹಾಗೂ ಸ್ಪಿನ್ನರ್ ರೋಲೊಫ್ ವ್ಯಾನ್ ಡರ್ ಮರ್ವೆ ದೊಡ್ಡ ಪಾತ್ರ ನಿಭಾಯಿಸಿದ್ದರು.
ದಕ್ಷಿಣ ಆಫ್ರಿಕಾ ತಂಡದ ಎದುರು ವ್ಯಾನ್ ಮೀಕೆರೆನ್ ಪ್ರಮುಖ ಏಡನ್ ಮರ್ಕ್ರಮ್ ಹಾಗೂ ಮಾರ್ಕೊ ಜಾನ್ಸೆನ್ ವಿಕೆಟ್ ಗಳನ್ನು ಕೀಳುವ ಮೂಲಕ ನೆದರ್ಲ್ಯಾಂಡ್ಸ್ ತಂಡವು ತನ್ನ 245 ರನ್ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ದಕ್ಷಿಣ ಆಫ್ರಿಕಾ ತಂಡದ ಈ ಸೋಲು ಕ್ರಿಕೆಟ್ ಜಗತ್ತಿನಲ್ಲಿ ಆಘಾತದ ತರಂಗಗಳನ್ನು ಉಂಟು ಮಾಡಿದ್ದರೆ, ವ್ಯಾನ್ ಮೆಕೆರೆನ್ ಅವರ ಜೀವನಗಾಥೆಯು ನೆದರ್ಲ್ಯಾಂಡ್ಸ್ ತಂಡದ ಗೆಲುವನ್ನು ಮತ್ತಷ್ಟು ಗೌರವಯುತವಾಗಿಸಿದೆ.
ವೇಗದ ಬೌಲರ್ ವ್ಯಾನ್ ಮೀಕೆರೆನ್ ತಮ್ಮ ಜೀವನೋಪಾಯಕ್ಕಾಗಿ 2020ರಲ್ಲಿ ಉಬರ್ ಈಟ್ಸ್ ಮೂಲಕ ಆಹಾರ ಪೂರೈಸುವ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸಿದ್ದರು.
2020ರಲ್ಲಿ ಟ್ವೀಟ್ ಮಾಡಿದ್ದ ವ್ಯಾನ್ ಮೆಕೆರೆನ್, ಕೋವಿಡ್-19 ಸಾಂಕ್ರಾಮಿಕದಿಂದ 2020ರ ಟಿ-20 ವಿಶ್ವಕಪ್ ಮುಂದೂಡಲ್ಪಟ್ಟಾಗ ನಾನು ಉಬರ್ ಈಟ್ಸ್ ನಲ್ಲಿ ಆಹಾರದ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸಿದ್ದೆ ಎಂದು ಬರೆದುಕೊಂಡಿದ್ದರು. ಇದೀಗ ಈ ಟ್ವೀಟ್ ವೈರಲ್ ಆಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವ್ಯಾನ್ ಮೆಕೆರೆನ್, “ಚಳಿಗಾಲದ ತಿಂಗಳುಗಳನ್ನು ಕಳೆಯಲು ನಾನು ಉಬರ್ ಈಟ್ಸ್ ಆಹಾರ ಸರಬರಾಜು ಮಾಡುತ್ತಿದ್ದುದರಿಂದ ನಾನೀಗ ಕ್ರಿಕೆಟ್ ಆಡುತ್ತಿದ್ದೇನೆ. ವಿಷಯಗಳು ಹೇಗೆ ಬದಲಾಗುತ್ತವೆ ಎಂಬುದು ತಮಾಷೆಯ ಸಂಗತಿ.. ಹ್ಹಹ್ಹಹ್ಹ.. ಸದಾ ನಗುತ್ತಿರಿ ಜನರೆ” ಎಂದು ಬರೆದುಕೊಂಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದಿಂದ ಕ್ರಿಕೆಟ್ ಅನಿರ್ದಿಷ್ಟಾವಧಿಯವರೆಗೆ ನಿಲುಗಡೆಯಾಗಿದ್ದರಿಂದ ನಾನು ಉಬರ್ ಈಟ್ಸ್ ನಲ್ಲಿ ನನ್ನ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ವ್ಯಾನ್ ಮೆಕೆರೆನ್ ಹೇಳಿಕೊಂಡಿದ್ದಾರೆ.