ಫೆಲೆಸ್ತೀನ್ ದುರಂತದ ಬಗ್ಗೆ ಜಗತ್ತಿನ ದ್ವಂದ್ವ ನಿಲುವು ಆಘಾತಕಾರಿ: ಜೋರ್ಡಾನ್ ರಾಣಿ ರಾನಿಯ
ರಾನಿಯಾ ಅಲ್ ಅಬ್ದುಲ್ಲಾ ( Photo: youtube/@QueenRania)
ನಿರೂಪಕಿ: ವಿಶ್ವಸಂಸ್ಥೆಯ ಪ್ರಕಾರ ಮಧ್ಯಪ್ರಾಚ್ಯದಲ್ಲಿ ನೋಂದಣಿಯಾಗಿರುವ ಒಟ್ಟು ಫೆಲೆಸ್ತೀನಿ ನಿರಾಶ್ರಿತರ ಪೈಕಿ ಶೇ.40ರಷ್ಟು ಜನರಿಗೆ ಜೋರ್ಡಾನ್ ಮನೆಯಾಗಿದೆ. ಮೊಟ್ಟ ಮೊದಲಿಗೆ, ಓರ್ವ ಅರಬ್ ಆಗಿ, ಓರ್ವ ಫೆಲೆಸ್ತೀನಿಯಾಗಿ, ಓರ್ವ ಮಾನವ ಜೀವಿಯಾಗಿ, ಓರ್ವ ತಾಯಿಯಾಗಿ ಅ.7ರಿಂದ ನಿಮ್ಮ ಭಾವನೆಗಳೇನು ಎಂದು ನಾನು ನಿಮ್ಮನ್ನು ಕೇಳಬಹುದೇ?
ರಾಣಿ ರಾನಿಯಾ: ಓರ್ವ ತಾಯಿಯಾಗಿ ನಾವು, ಶೆಲ್ ಬಡಿದು ಸಾಯುವ ಮತ್ತು ತಮ್ಮ ಶರೀರಗಳು ಶವಗಳಾಗಿ ಬದಲಾಗುವ ಅತಿ ಹೆಚ್ಚಿನ ಸಾಧ್ಯತೆಯಿರುವುದರಿಂದ ತಮ್ಮ ಮಕ್ಕಳ ಹೆಸರುಗಳನ್ನು ತಮ್ಮ ಕೈಮೇಲೆ ಬರೆದಿಟ್ಟುಕೊಳ್ಳಬೇಕಾಗಿರುವ ಫೆಲೆಸ್ತೀನಿ ತಾಯಂದಿರನ್ನು ನಾವು ಹೇಗೆ ನೋಡುತ್ತೇವೆಯೋ ಎನ್ನುವುದು ನನಗೆ ಗೊತ್ತಿಲ್ಲ. ಈ ಜಗತ್ತಿನಲ್ಲಿಯ ಇತರ ಯಾವುದೇ ತಾಯಿ ತನ್ನ ಮಕ್ಕಳನ್ನು ಪ್ರೀತಿಸುವಷ್ಟೇ ಫೆಲೆಸ್ತೀನಿ ತಾಯಂದಿರೂ ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ ಎನ್ನುವುದನ್ನು ವಿಶ್ವಕ್ಕೆ ನೆನಪಿಸಲು ನಾನು ಬಯಸುತ್ತಿದ್ದೇನೆ ಅಷ್ಟೇ ಮತ್ತು ಅದಕ್ಕಾಗಿ ಅವರು ಇಷ್ಟೆಲ್ಲ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಜೋರ್ಡಾನ್ ಸೇರಿದಂತೆ ಮಧ್ಯಪ್ರಾಚ್ಯದ ಸುತ್ತಲಿನ ನಾವೆಲ್ಲ ಕಳೆದೆರಡು ವಾರಗಳಿಂದ ತೆರೆದುಕೊಳ್ಳುತ್ತಿರುವ ಈ ದುರಂತಕ್ಕೆ ಜಗತ್ತಿನ ಪ್ರತಿಕ್ರಿಯೆಯಿಂದ ಆಘಾತಗೊಂಡಿದ್ದೇವೆ ಮತ್ತು ನಿರಾಶರಾಗಿದ್ದೇವೆ. ಅ.7ರಂದು ಅದು ಸಂಭವಿಸಿದಾಗ ವಿಶ್ವದಲ್ಲಿ ಎದ್ದುಕಾಣುವ ದ್ವಂದ್ವ ನಿಲುವನ್ನು ನಾವು ನೋಡಿದ್ದೇವೆ. ಜಗತ್ತು ತಕ್ಷಣವೇ ನಿಸ್ಸಂದಿಗ್ಧವಾಗಿ ಇಸ್ರೇಲ್ನ ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಅದರ ಹಕ್ಕಿನ ಬೆಂಬಲಕ್ಕೆ ನಿಂತಿತ್ತು ಹಾಗೂ ಅದರ ಮೇಲಿನ ದಾಳಿಯನ್ನು ಖಂಡಿಸಿತ್ತು. ಆದರೆ ಕಳೆದೆರಡು ವಾರಗಳಿಂದ ಜಗತ್ತಿನಲ್ಲಿ ಮೌನವನ್ನು ನಾವು ನೋಡುತ್ತಿದ್ದೇವೆ, ದೇಶಗಳು ಕಳವಳವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿವೆ ಮತ್ತು ಸಾವುನೋವುಗಳನ್ನು ಒಪ್ಪಿಕೊಳ್ಳುತ್ತಿವೆ, ಆದರೆ ಯಾವಾಗಲೂ ಇಸ್ರೇಲ್ಗೆ ಬೆಂಬಲದ ಘೋಷಣೆಯ ಮುನ್ನುಡಿಯೊಂದಿಗೆ.
ಇಡೀ ಕುಟುಂಬವನ್ನು ಗನ್ ಪಾಯಿಂಟ್ನಲ್ಲಿ ಕೊಲ್ಲುವುದು ತಪ್ಪು, ಆದರೆ ಶೆಲ್ ದಾಳಿಯಿಂದ ಅವರನ್ನು ಸಾಯಿಸುವುದು ಸರಿ ಎಂದು ನಮಗೆ ಹೇಳಲಾಗುತ್ತಿದೆ. ಇಲ್ಲಿ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ ಮತ್ತು ಇದು ಅರಬ್ ಜಗತ್ತಿಗೆ ಆಘಾತಕಾರಿಯಾಗಿದೆ. ಇಂತಹ ಮಾನವ ಸಂಕಷ್ಟವೊಂದು ಸೃಷ್ಟಿಯಾಗಿರುವುದು ಮತ್ತು ಜಗತ್ತು ಕದನ ವಿರಾಮಕ್ಕೆ ಕರೆ ನೀಡದಿರುವುದು ಆಧುನಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ. ಆದ್ದರಿಂದ ಮೌನವು ಕಿವುಡಾಗಿಸುತ್ತಿದೆ ಮತ್ತು ಇಸ್ರೇಲ್ನ್ನು ಬೆಂಬಲಿಸುವ ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಅದರ ಹಕ್ಕನ್ನು ಸಮರ್ಥಿಸುವ ಮೂಲಕ ಪಾಶ್ಚಾತ್ಯ ಜಗತ್ತಿನ ಸಹಭಾಗಿತ್ವವನ್ನು ನಮ್ಮ ಪ್ರದೇಶದ ಹೆಚ್ಚಿನವರು ನೋಡುತ್ತಿದ್ದಾರೆ. ಪಾಶ್ಚಾತ್ಯ ಜಗತ್ತು ಇದನ್ನು ಸಹಿಸಿಕೊಳ್ಳುತ್ತಿರುವುದು ಮಾತ್ರವಲ್ಲ,ಇದಕ್ಕೆ ನೆರವು ಮತ್ತು ಕುಮ್ಮಕ್ಕನ್ನೂ ನೀಡುತ್ತಿದೆ ಎಂದು ಅರಬ್ ಜಗತ್ತಿನಲ್ಲಿ ಹೆಚ್ಚಿನವರು ಭಾವಿಸಿದ್ದಾರೆ. ಇದು ಭಯಾನಕವಾಗಿದೆ ಮತ್ತು ನಮ್ಮೆಲ್ಲರನ್ನೂ ತೀವ್ರವಾಗಿ ನಿರಾಶೆಗೊಳಿಸುತ್ತಿದೆ.
ನಿರೂಪಕಿ: ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ಇಸ್ರೇಲಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎನ್ನುವುದು ನಿಮಗೆ ಗೊತ್ತೇ? ಹಾಲೋಕಾಸ್ಟ್ (ಇಸ್ರೇಲಿಗಳ ಹತ್ಯಾಕಾಂಡ) ಬಳಿಕ ಇಂತಹುದು ಎಂದಿಗೂ ಅವರಿಗೆ ಸಂಭವಿಸಿರಲಿಲ್ಲ ಮತ್ತು ಅವರು ಹೃದಯಾಂತರಾಳದಲ್ಲಿ ಆಘಾತಗೊಂಡಿದ್ದಾರೆ. ಅ.7ರಂದು ನಿಮಗೆ ಏನು ಅನ್ನಿಸಿತ್ತು ಎನ್ನುವುದನ್ನು ನಿಮ್ಮಿಂದ ಕೇಳಲು ಬಯಸಿದ್ದೇನೆ.
ರಾಣಿ ರಾನಿಯಾ: ಸರಿ, ನಾನು ಖಂಡಿತವಾಗಿಯೂ ಆಘಾತಕ್ಕೊಳಗಾಗಿದ್ದೆ ಮತ್ತು ಜೋರ್ಡಾನ್ ಅತ್ಯಂತ ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಫೆಲೆಸ್ತೀನಿ ಅಥವಾ ಇಸ್ರೇಲಿ ಆಗಿರಲಿ, ಯಾವುದೇ ನಾಗರಿಕರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಇದು ಜೋರ್ಡಾನ್ನ ನೈತಿಕ ನಿಲುವು ಆಗಿದೆ ಮತ್ತು ಇಸ್ಲಾಮ್ನ ನಿಲುವೂ ಆಗಿದೆ. ನನ್ನ ಪತಿ ಇತ್ತೀಚಿಗೆ ಉಲ್ಲೇಖಿಸಿದ್ದಂತೆ ಇಸ್ಲಾಮ್ ನಾಗರಿಕರ ಹತ್ಯೆಯನ್ನು ಖಂಡಿಸುತ್ತದೆ. ಜಿನಿವಾ ಒಪ್ಪಂದಗಳಿಗೆ ಒಂದು ಸಾವಿರ ವರ್ಷಗಳ ಮೊದಲು 15 ಶತಮಾನಗಳ ಹಿಂದೆ ಜೆರುಸಲೇಮ್ನ ಗೇಟ್ಗಳಲ್ಲಿ ಹೊರಡಿಸಲಾಗಿದ್ದ ಉಮರ್ ಒಪ್ಪಂದವು ಮಹಿಳೆ, ಮಗು ಅಥವಾ ವಯಸ್ಸಾದ ವ್ಯಕ್ತಿಗೆ ನೋವುಂಟು ಮಾಡದಂತೆ ಅಥವಾ ಕೊಲ್ಲದಂತೆ, ಮರವನ್ನು ನಾಶ ಮಾಡದಂತೆ ಮತ್ತು ಧರ್ಮಗುರುವಿಗೆ ನೋವುಂಟು ಮಾಡದಂತೆ ಮುಸ್ಲಿಮರಿಗೆ ಆದೇಶಿಸಿದೆ.
ಆದ್ದರಿಂದ ಇವು ಯುದ್ಧದ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಎಂದು ನಾವು ನಂಬಿದ್ದೇವೆ, ಆದರೆ ಇವು ಎಲ್ಲರಿಗೂ ಅನ್ವಯವಾಗಬೇಕು. ಹೀಗಾಗಿ ಆಘಾತವಿದೆ, ಖಂಡನೆಯಿದೆ ನಿಜ, ಆದರೆ ಈಗ ನಡೆಯುತ್ತಿರುವುದಕ್ಕೆ ಇದು ಏಕೆ ಸಮಾನವಾಗಿಲ್ಲ? ಸಂಘರ್ಷವು ಅ.7ರಂದು ಆರಂಭಗೊಂಡಿತು ಎಂದು ಬಿಂಬಿಸಲಾಗುತ್ತಿದೆಯಾದರೂ ಅದು ಹಾಗಲ್ಲ ಎಂದು ನಾನು ಒತ್ತಿಹೇಳಲು ಬಯಸುತ್ತೇನೆ. ನಿಮಗೆ ಗೊತ್ತೇ? ಹೆಚ್ಚಿನ ನೆಟ್ವರ್ಕ್ಗಳು ಇಸ್ರೇಲ್ ಯುದ್ಧದಲ್ಲಿದೆ ಎಂಬ ಶೀರ್ಷಿಕೆಯಡಿ ವರದಿಯನ್ನು ಮಾಡುತ್ತಿವೆ, ಆದರೆ ಪ್ರತ್ಯೇಕತೆಯ ಗೋಡೆಯಾಚೆಯ, ಮುಳ್ಳುತಂತಿಗಳ ಬೇಲಿಯಾಚೆಯ ಅನೇಕ ಫೆಲೆಸ್ತೀನಿಗಳಿಗೆ ಯುದ್ಧವು ಎಂದಿಗೂ ಬೆನ್ನು ಬಿಟ್ಟಿಲ್ಲ.
ಇದು 75 ವರ್ಷಗಳಷ್ಟು ಹಳೆಯದಾಗಿರುವ ಕಥೆ, ಫೆಲೆಸ್ತೀನಿಗಳ ಅಗಾಧ ಸಾವುಗಳು ಮತ್ತು ಸ್ಥಳಾಂತರಗಳ ಕಥೆ, ಇದು ರಾತ್ರೋರಾತ್ರಿ ಮಿಲಿಟರಿ ದಾಳಿಗಳಲ್ಲಿ ಮನೆಗಳನ್ನು ನೆಲಸಮಗೊಳಿಸುವ ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುವ ವರ್ಣಭೇದ ನೀತಿಯಡಿಯ ಆಕ್ರಮಣಗಳ ಕಥೆ. ಪ್ರದೇಶದಲ್ಲಿಯ ಪರಮಾಣು ಸಜ್ಜಿತ ಬಲಾಢ್ಯ ದೇಶ ಇಸ್ರೇಲ್ ಆಕ್ರಮಣ ಮತ್ತು ದಬ್ಬಾಳಿಕೆಗಳ ಮೂಲಕ ಫೆಲೆಸ್ತೀನಿಯರ ವಿರುದ್ಧ ದಿನಿನತ್ಯ ಎಸಗುತ್ತಿರುವ ದಾಖಲಿತ ಅಪರಾಧಗಳು ನಿರೂಪಣೆಯಿಂದ ಕಾಣೆಯಾಗಿವೆ ಎನ್ನುವುದು ನಿಮಗೆ ಗೊತ್ತೇ?
ನಿರೂಪಕಿ: ಸ್ಪಷ್ಟವಾಗಿ ನಿಮ್ಮ ಅರಬ್ ಜಗತ್ತಿನಲ್ಲಿಯ ಹಲವರು ಬಳಸಿರುವ ವರ್ಣಭೇದದಂತಹ ಹಲವಾರು ಪದಗಳನ್ನು ನೀವು ಬಳಸುತ್ತಿರುವುದರಿಂದ ನಿಮಗೆ ನಿರ್ದಿಷ್ಟ ಪ್ರಶ್ನೆಯೊಂದನ್ನು ಕೇಳಲು ನಾನು ಬಯಸಿದ್ದೇನೆ. ಆದರೆ ನೀವು ಇಸ್ರೇಲ್ ಮತ್ತು ಅದರ ಬೆಂಬಲಿಗರಿಂದ ಬಹಳಷ್ಟು ಟೀಕೆಗಳಿಗೆ ಗುರಿಯಾಗಲಿದ್ದೀರಿ ಎನ್ನುವುದು ನಿಮಗೆ ಗೊತ್ತೇ?
ರಾಣಿ ರಾನಿಯಾ: ಆದರೆ ಆ ಪದಗಳು ಅರಬ್ಬರು ನೀಡಿದ್ದಲ್ಲ, ಇಸ್ರೇಲ್ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ನೀಡಿದ್ದು ಎಂದು ನಾನು ಒತ್ತಿ ಹೇಳುತ್ತೇನೆ.
ನಿರೂಪಕಿ: ಜೋರ್ಡಾನ್ನ ರಾಣಿಯಾಗಿ ಇಸ್ರೇಲ್ನೊಂದಿಗೆ ಶಾಂತಿ ಒಪ್ಪಂದವನ್ನು ಹೊಂದಿರುವ ದೇಶದಲ್ಲಿ ಮಾತನಾಡಲು ನಿರ್ದಿಷ್ಟ ಧ್ವನಿಯನ್ನು ನೀವು ಹೊಂದಿದ್ದೀರಿ ಎಂದು ನೀವು ಭಾವಿಸಿದ್ದೀರಾ?
ರಾಣಿ ರಾನಿಯಾ: ಇಲ್ಲ, ಅದು ನನ್ನ ಬಗ್ಗೆ ಅಲ್ಲ. ಅದು ಮಾನವೀಯತೆಗಾಗಿ ಮಾತನಾಡುವ ಬಗ್ಗೆ ಆಗಿದೆ, ಅದು ಇಸ್ರೇಲಿ ಪರ ಅಥವಾ ಫೆಲೆಸ್ತೀನಿ ಪರವಾಗಿರುವುದರ ಬಗ್ಗೆ ಅಲ್ಲ. ಅದು ಫೆಲೆಸ್ತೀನಿಗಳು ವರ್ಷಗಳಿಂದಲೂ ದಬ್ಬಾಳಿಕೆ ಮತ್ತು ಅಮಾನವೀಯತೆಯಡಿ ಬದುಕಿದ್ದಾರೆ ಎನ್ನುವುದನ್ನು ಇನ್ನೊಮ್ಮೆ ವಿವರಿಸಲು, ಅವರು ದಿನಿನತ್ಯದ ಅವಮಾನಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಅನುಭವಿಸುತ್ತಿದ್ದಾರೆ, ಅವರು ಚಲನವಲನದ ಸ್ವಾತಂತ್ರ್ಯವನ್ನು ಹೊಂದಿಲ್ಲ ಎನ್ನುವುದರ ಬಗ್ಗೆ. ಪಶ್ಚಿಮ ದಂಡೆಯಾದ್ಯಂತ 500ಕ್ಕೂ ಅಧಿಕ ಚೆಕ್ಪಾಯಿಂಟ್ಗಳು ಹರಡಿಕೊಂಡಿವೆ, ಅಂತರರಾಷ್ಟ್ರೀಯ ನ್ಯಾಯಾಲಯದಿಂದ ಕಾನೂನು ಬಾಹಿರ ಎಂದು ಪರಿಗಣಿಸಲಾಗಿರುವ ಪ್ರತ್ಯೇಕಿಸುವ ಗೋಡೆ ಎದ್ದು ನಿಂತಿದೆ, ಇದು ಪ್ರದೇಶವನ್ನು ಸಂಪರ್ಕ ಕಡಿತಗೊಂಡಿರರುವ 500 ಎನ್ಕ್ಲೇವ್ಗಳನ್ನಾಗಿ ಪ್ರತ್ಯೇಕಿಸಿದೆ.
ಫೆಲೆಸ್ತೀನಿ ಭೂಮಿಯಲ್ಲಿ ವಸಾಹತುಗಳ ಆಕ್ರಮಣಕಾರಿ ವಿಸ್ತರಣೆಯನ್ನು ನೀವು ನೋಡಿದ್ದೀರಿ ಮತ್ತು ಅವು ಪ್ರಾಂತ್ಯಗಳ ಪ್ರಾದೇಶಿಕ ಸಂಪರ್ಕಕ್ಕೆ ಅಡ್ಡಿಯನ್ನುಂಟು ಮಾಡಿವೆ ಮತ್ತು ಸ್ವಾಯತ್ತ ಸ್ವತಂತ್ರ ಫೆಲೆಸ್ತೀನ್ ದೇಶವು ಕಾರ್ಯಸಾಧ್ಯವಲ್ಲ ಎಂದು ಪರಿಗಣಿಸಲಾಗಿದೆ. ನೀವು ಇವೆಲ್ಲವನ್ನೂ ನೋಡುತ್ತಿದ್ದೀರಿ ಮತ್ತು ಇವು ಈ ಸಂಘರ್ಷದ ಹಿನ್ನೆಲೆಯಾಗಿವೆ. ಕಳೆದರಡು ವಾರಗಳ ಬೆಳವಣಿಗೆಯಿಂದಾಗಿ ಹಮಾಸ್ ಕುರಿತು ಪೂರ್ವಾಗ್ರಹಗಳಿವೆ, ಆದರೆ ಸಮಸ್ಯೆಯು ಹಮಾಸ್ಗಿಂತ ಮೊದಲೇ ಇತ್ತು ಮತ್ತು ಹಮಾಸ್ ನಂತರವೂ ಮುಂದುವರಿಯುತ್ತದೆ. ಇದು ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಟವಾಗಿದೆ ಮತ್ತು ಅದಕ್ಕೆ ಕಿವಿಗೊಡಲೇಬೇಕಾದ ಅಗತ್ಯವಿದೆ.
ನಿರೂಪಕಿ: ಸೌದಿ ಟಿವಿ ಜಾಲ ಅಲ್ ಅರೇಬಿಯದ ಪತ್ರಕರ್ತರೋರ್ವರು ಈ ವಿಷಯವನ್ನು ಕೈಗೆತ್ತಿಕೊಂಡಿದ್ದರು ಮತ್ತು ಹಮಾಸ್ನ ಮಾಜಿ ಮುಖ್ಯಸ್ಥ ಖಾಲಿದ್ ಮಶಾಲ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಟಿವಿ ಪರದೆಗಳಲ್ಲಿ ಜನರು ನೋಡುತ್ತಿರುವುದು ಫೆಲೆಸ್ತೀನಿ ಹೋರಾಟದಿಂದ ಜಗತ್ತನ್ನು ದೂರಕ್ಕೊಯ್ದಿದೆ ಮತ್ತು ಹಮಾಸ್ನ ಕೃತ್ಯದ ಪರಿಣಾಮವನ್ನು ಗಾಝಾದ ಬಡ ಜನರು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದರು. ನೀವು ಇದನ್ನು ಒಪ್ಪಿಕೊಳ್ಳುತ್ತೀರಾ?
ರಾಣಿ ರಾನಿಯಾ: ನಾನು ನಾಗರಿಕರ ಹತ್ಯೆಗಳನ್ನು ಬೆಂಬಲಿಸುವುದಿಲ್ಲ. ಆದರೆ ಈ ಹಿಂಸಾಚಾರದ ಕಥೆಯು ಬಹಳ ಸಮಯದಿಂದಲೂ ನಡೆಯುತ್ತಿದೆ ಮತ್ತು ಈ ಹಿಂಸಾಚಾರವನ್ನು ಖಂಡಿಸುವ ಅಗತ್ಯವಿದೆ. ಆದರೆ ದಿನದ ಕೊನೆಯಲ್ಲಿ ನಾವು ನೋಡುತ್ತಿರುವುದು ಮತ್ತು ಜನರು ಅರ್ಥ ಮಾಡಿಕೊಳ್ಳಬೇಕಿರುವುದು ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ನೆಪದಲ್ಲಿ ಎಸಗುತ್ತಿರುವ ದೌರ್ಜನ್ಯಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎನ್ನುವುದನ್ನು. ಪ್ರತಿಯೊಂದೂ ದೇಶವು ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ,ಆದರೆ ಯುದ್ಧಾಪರಾಧಗಳು ಮತ್ತು ಸಾಮೂಹಿಕ ದಂಡನೆಯ ಮೂಲಕ ಅಲ್ಲ. 6,000 ನಾಗರಿಕರು ಈವರೆಗೆ ಕೊಲ್ಲಲ್ಪಟ್ಟಿದ್ದಾರೆ, 2,400 ಮಕ್ಕಳು...ಇದು ಹೇಗೆ ಆತ್ಮರಕ್ಷಣೆಯಾಗುತ್ತದೆ? ನಿಖರ ದಾಳಿಯ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಸಾಮೂಹಿಕ ಮಾರಣಹೋಮವನ್ನು ನಾವು ನೋಡುತ್ತಿದ್ದೇವೆ.
ಕಳೆದೆರಡು ವಾರಗಳಲ್ಲಿ ಗಾಝಾದ ಮೇಲೆ ವಿವೇಚನೆಯಿಲ್ಲದ ಬಾಂಬ್ ದಾಳಿಗಳನ್ನು ನಾವು ನೋಡಿದ್ದೇವೆ, ಇಡೀ ಕುಟುಂಬಗಳು ನಿರ್ನಾಮಗೊಂಡಿವೆ, ವಸತಿ ಕಟ್ಟಡಗಳು ನೆಲಸಮಗೊಂಡಿವೆ. ಆಸ್ಪತ್ರೆಗಳು, ಶಾಲೆಗಳು, ಚರ್ಚ್ಗಳು, ಮಸೀದಿಗಳು, ವೈದ್ಯಕೀಯ ಕಾರ್ಯಕರ್ತರು, ಪತ್ರಕರ್ತರು, ನೆರವು ಕಾರ್ಯಕರ್ತರು..... ಇವೆಲ್ಲವನ್ನೂ ಗುರಿಯಾಗಿಸಿಕೊಳ್ಳಲಾಗಿದೆ. ಇದು ಆತ್ಮ ರಕ್ಷಣೆ ಹೇಗಾಗುತ್ತದೆ? ಇಸ್ರೇಲ್ ಈ ದೌರ್ಜನ್ಯಗಳನ್ನು ನಡೆಸಿದಾಗೆಲ್ಲ ಅದು ಆತ್ಮ ರಕ್ಷಣೆ ಎಂದು ಕರೆಯಲಾಗುತ್ತದೆ ಮತ್ತು ಫೆಲೆಸ್ತೀನಿಗಳು ಹಿಂಸಾಚಾರ ನಡೆಸಿದಾಗೆಲ್ಲ ತಕ್ಷಣವೇ ಅದನ್ನು ಭಯೋತ್ಪಾದನೆ ಎಂದು ಬಿಂಬಿಸಲಾಗುತ್ತಿದೆ, ಏಕೆ ಎನ್ನುವುದು ನಿಮಗೆ ಗೊತ್ತೇ? ಭಯೋತ್ಪಾದಕ ಪದವನ್ನು ಕೇವಲ ಮುಸ್ಲಿಮರು ಮತ್ತು ಅರಬ್ಬರಿಗಾಗಿಯೇ ಮೀಸಲಿಡಲಾಗಿದೆಯೇ? ಇದು ನಾವು ನೋಡುತ್ತಿರುವ ನಿಜವಾದ ದ್ವಂದ್ವ ನಿಲುವು ಆಗಿದೆ.
ಸಂಘರ್ಷದಲ್ಲಿ ಎರಡು ಸಮಾನ ದೇಶಗಳಿಲ್ಲ. ಒಂದು ಆಕ್ರಮಿಸಿಕೊಂಡಿದ್ದರೆ ಇನ್ನೊಂದು ಆಕ್ರಮಿತವಾಗಿದೆ. ಒಂದು ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ಸೇನೆಗಳಲ್ಲೊಂದನ್ನು ಹೊಂದಿದ್ದರೆ ಇನ್ನೊಂದರ ಬಳಿ ಸೇನೆಯೇ ಇಲ್ಲ. ಹೀಗಾಗಿ ಇಲ್ಲಿ ಸಮಾನತೆಯೇ ಇಲ್ಲ. ಅಲ್ಲದೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಎಂದು ನೀವು ಹೇಳಿದಾಗ ಅದು ಇಡೀ ಕಥೆಯನ್ನು ಹೇಳುವುದಿಲ್ಲ, ಅದು ಅಂತರರಾಷ್ಟ್ರೀಯ ಕಾನೂನು, ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆಗಳನ್ನು ಹೇಳುವುದಿಲ್ಲ. ಅದು ಸಂಕಷ್ಟಗಳು ಮತ್ತು ಆಕ್ರಮಣದ ಕಥೆಯನ್ನು ಹೇಳುವುದಿಲ್ಲ. ಇಸ್ರೇಲ್ ತಾನು 1967ರಲ್ಲಿ ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ ಹಿಂದೆ ಸರಿಯುವುದನ್ನು ಅಗತ್ಯವಾಗಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕನಿಷ್ಠ 37 ನಿರ್ಣಯಗಳನ್ನು ಉಲ್ಲಂಘಿಸಿದೆ. ಇದು ಸಮಸ್ಯೆಯ ಮೂಲವಾಗಿದೆ.
ನಿರೂಪಕಿ: ಫೆಲೆಸ್ತೀನಿ ಜೀವಗಳಿಗಿಂತ ಇಸ್ರೇಲಿ ಜೀವಗಳು ಹೆಚ್ಚು ಮುಖ್ಯವಾಗಿವೆ ಎಂಬ ಸ್ಪಷ್ಟ ಸಂದೇಶವನ್ನು ಅರಬ್ ಜಗತ್ತಿಗೆ ರವಾನಿಸಲಾಗಿದೆ ಎಂದು ನಿಮ್ಮ ಪತಿ ದೊರೆ ಅಬ್ದುಲ್ಲಾ II ಕಳೆದ ವಾರಾಂತ್ಯದಲ್ಲಿ ಕೈರೋದಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಹೇಳಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ರಾನಿ ರಾನಿಯಾ: ಅ.7ರಂದು ಸಂಭವಿಸಿದ್ದನ್ನು ಜಗತ್ತು ಬಲವಾಗಿ ಖಂಡಿಸಿತ್ತು ಮತ್ತು ಇಂದು ಸಂಭವಿಸುತ್ತಿರುವುದರ ಕುರಿತು ಅತ್ಯಂತ ಕಡಿಮೆ ಖಂಡನೆ ಕಾಣುತ್ತಿದೆ, ಜಗತ್ತಿನಲ್ಲಿಯ ದ್ವಂದ್ವ ನಿಲುವು ನಿರಾಶಾದಾಯಕವಾಗಿದೆ. ತಕ್ಷಣ ಕದನ ವಿರಾಮಕ್ಕೆ ಕರೆ ನೀಡಲಾಗುತ್ತಿಲ್ಲ ಏಕೆ? ಇಂದು ಸೃಷ್ಟಿಯಾಗಿರುವ ತೀವ್ರ ಮಾನವ ಸಂಕಷ್ಟಗಳನ್ನು ನಾವು ನೋಡುತ್ತಿದ್ದೇವೆ. ನಿರೂಪಣೆಯು ಏಕೆ ಯಾವಾಗಲೂ ಇಸ್ರೇಲ್ ಕಡೆಗೇ ವಾಲಿರುತ್ತದೆ? ಪಾಶ್ಚಾತ್ಯ ಮಾಧ್ಯಮಗಳು ಮತ್ತು ನೀತಿ ನಿರೂಪಕರು ಇಸ್ರೇಲ್ ಫೆಲೆಸ್ತೀನ್ ಮೇಲೆ ದಾಳಿ ನಡೆಸಿದಾಗ ಅದರ ನಿರೂಪಣೆಗಳನ್ನು ತ್ವರಿತ ಸ್ವೀಕರಿಸುತ್ತಾರೆ, ಆದರೆ ಇಸ್ರೇಲಿಗಳು ಸತ್ತಾಗ ಅವರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಬಣ್ಣಿಸಲಾಗುತ್ತದೆ. ಅ.7ರಂದು ಸಂಭವಿಸಿದ್ದನ್ನು ಕ್ರೂರ ಹತ್ಯಾಕಾಂಡ ಎಂದು ಕರೆಯಲಾಗಿದ್ದನ್ನು ನಾವು ನೋಡಿದ್ದೇವೆ, ಆದರೆ ಇಂದು ದೌರ್ಜನ್ಯಗಳು ಹೆಚ್ಚಿದ್ದರೂ, ಇಂದು ಸಂಭವಿಸುತ್ತಿರುವುದನ್ನು ವಿವರಿಸುವಾಗ ಆ ಪರಿಭಾಷೆಯನ್ನು ನಾವು ನೋಡುತ್ತಿಲ್ಲ.
ಈ ಸಂದರ್ಶನದ ವಿಡಿಯೋ ಇಲ್ಲಿದೆ: