ವಿಮಾನದ ಶೌಚಾಲಯ ಬಂದ್; 10 ಗಂಟೆಗಳ ಹಾರಾಟದ ಬಳಿಕ ಚಿಕಾಗೊಗೆ ವಾಪಸ್ಸಾದ ಏರ್ ಇಂಡಿಯಾ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಚಿಕಾಗೋದಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ತಾಂತ್ರಿಕ ಸಮಸ್ಯೆಗಳಿಂದಾಗಿ ಚಿಕಾಗೋಗೆ ಹಿಂದಿರುಗಬೇಕಾಯಿತು.
ವಿಮಾನದ ಶೌಚಾಲಯಗಳು ಕಾರ್ಯನಿರ್ವಹಿಸದ ಕಾರಣ ಹಿಂದಿರುಗಬೇಕಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
flightradar24.com ಪ್ರಕಾರ, ಬೋಯಿಂಗ್ 777-337 ER ವಿಮಾನವು ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ಚಿಕಾಗೋದ ORD ವಿಮಾನ ನಿಲ್ದಾಣಕ್ಕೆ ಮರಳಿತು.
ಮೊದಲ ದರ್ಜೆ, ಬ್ಯುಸಿನೆಸ್ ಕ್ಲಾಸ್ ಮತ್ತು ಇಕಾನಮಿ ದರ್ಜೆಗಳಲ್ಲಿ 340 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಬೋಯಿಂಗ್ 777-300 ER ವಿಮಾನವು, ಪ್ರಥಮ ದರ್ಜೆ ಪ್ರಯಾಣಿಕರಿಗಾಗಿ ಗೊತ್ತುಪಡಿಸಿದ ಎರಡು ಸೇರಿದಂತೆ 10 ಶೌಚಾಲಯಗಳನ್ನು ಹೊಂದಿತ್ತು. ಅದರಲ್ಲಿ ಕೇವಲ ಒಂದು ಶೌಚಾಲಯ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
"ಚಿಕಾಗೋದಲ್ಲಿ ಇಳಿದ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತೊಂದರೆಯಾಗದಿರಲು ವಸತಿ ಸೌಕರ್ಯವನ್ನು ಒದಗಿಸಲಾಗಿದೆ. ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ" ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರು ಟಿಕೆಟ್ ರದ್ದತಿ ಬಯಸಿದರೆ ಸಂಪೂರ್ಣ ಮರುಪಾವತಿ ಮತ್ತು ಮರು ಪ್ರಯಾಣ ಆರಿಸಿಕೊಂಡರೆ ಉಚಿತವಾಗಿ ಮರು ಪ್ರಯಾಣದ ಆಯ್ಕೆಗಳನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.