ನ್ಯೂಯಾರ್ಕ್: ಇಬ್ಬರು ಮಕ್ಕಳ ಸಹಿತ ನಾಲ್ವರ ಇರಿದು ಹತ್ಯೆ
ನ್ಯೂಯಾರ್ಕ್: ನ್ಯೂಯಾರ್ಕ್ನ ಕ್ವೀನ್ಸ್ಬರೋ ನಗರದಲ್ಲಿನ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಕುಟುಂಬದ ಇಬ್ಬರು ಮಕ್ಕಳ ಸಹಿತ 4 ಮಂದಿಯನ್ನು ರವಿವಾರ ಚೂರಿಯಿಂದ ಇರಿದು ಕೊಲೆ ಮಾಡಿದ್ದು ಬಳಿಕ ಶಂಕಿತ ಆರೋಪಿಯನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
11 ವರ್ಷದ ಬಾಲಕಿ, 12 ವರ್ಷದ ಬಾಲಕ, 30 ವರ್ಷದ ವ್ಯಕ್ತಿ ಹಾಗೂ 44 ವರ್ಷದ ಮಹಿಳೆ ಮೃತಪಟ್ಟಿದ್ದು 61 ವರ್ಷದ ಮಹಿಳೆ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. `ಸೋದರ ಸಂಬಂಧಿ ತಮ್ಮ ಮನೆಗೆ ನುಗ್ಗಿ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುತ್ತಿದ್ದಾನೆ' ಎಂದು ಬಾಲಕಿಯೊಬ್ಬಳು ಪೊಲೀಸರಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಆರೋಪಿ ಮನೆಯಲ್ಲಿದ್ದ ಮಂಚವೊಂದಕ್ಕೆ ಬೆಂಕಿಹಚ್ಚಿ ಪೊಲೀಸರು ಒಳಬಾರದಂತೆ ತಡೆದಿದ್ದಾನೆ. ಬಳಿಕ ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಿಯಂತ್ರಿಸಿದ ಪೊಲೀಸರು ಮನೆಯೊಳಗೆ ಹೋದಾಗ ಅವರ ಮೇಲೆಯೂ ದಾಳಿ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ಆಗ ಪೊಲೀಸರು ಗುಂಡಿಕ್ಕಿ ಆರೋಪಿಯನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯನ್ನು ಈ ಹಿಂದೆಯೂ ಕೌಟುಂಬಿಕ ಹಿಂಸೆಯ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.