ವಿವಾದಾತ್ಮಕ ಮಸೂದೆಯ ಪ್ರತಿಯನ್ನು ಹರಿದು ಹಾಕಿ, ಸಂಸತ್ತಿನಲ್ಲಿ ಬುಡಕಟ್ಟು ನೃತ್ಯ ಮಾಡಿದ ನ್ಯೂಝಿಲೆಂಡ್ ಸಂಸದೆ
Screengrab:X/@IndiaToday
ವೆಲ್ಲಿಂಗ್ಟನ್: ವಿವಾದಾತ್ಮಕ ಮಸೂದೆಯೊಂದರ ಪ್ರತಿಯೊಂದನ್ನು ಹರಿದು ಹಾಕಿ, ಸಾಂಪ್ರದಾಯಿಕ ಮವೋರಿ ಬುಡಕಟ್ಟು ನೃತ್ಯ ಮಾಡುವ ಮೂಲಕ ನ್ಯೂಝಿಲೆಂಡ್ ನ ಅತ್ಯಂತ ಕಿರಿಯ ಸಂಸದೆ ಹನಾ-ರೌಹಿತಿ ಕರೇಯರಿಕಿ ಮೈಪಿ-ಕ್ಲಾರ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೂ ಮುನ್ನ, ಕಳೆದ ವರ್ಷ ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡುವಾಗಲೂ ಕೂಡಾ ಅವರು ʼಹಕಾʼ ನೃತ್ಯವನ್ನು ಪ್ರದರ್ಶಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.
ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಟ್ರೀಟಿ ಪ್ರಿನ್ಸಿಪಲ್ಸ್ ಮಸೂದೆಗೆ ವಂದನಾರ್ಪಣೆ ಸಲ್ಲಿಸುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿರುವ 22 ವರ್ಷದ ಟೆ ಪಾಟಿ ಮವೋರಿ ಸಂಸದೆ, ಹಕಾ ನೃತ್ಯವನ್ನು ಪ್ರದರ್ಶಿಸುವುದಕ್ಕೂ ಮುನ್ನ, ಶಾಸನದ ಪ್ರತಿಯನ್ನು ಹರಿದು ಹಾಕುತ್ತಿರುವುದು ಸೆರೆಯಾಗಿದೆ. ನಂತರ, ಸಾರ್ವಜನಿಕರ ಗ್ಯಾಲರಿಯಲ್ಲಿದ್ದ ಜನರೂ ಅವರೊಂದಿಗೆ ಹೆಜ್ಜೆ ಹಾಕಿದ್ದರಿಂದ, ಸ್ಪೀಕರ್ ಗೆರ್ರಿ ಬ್ರೌನ್ಲೀ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು.
ನ್ಯೂಝಿಲೆಂಡ್ ಸರಕಾರದಲ್ಲಿ ಕಿರಿಯ ಮೈತ್ರಿ ಪಕ್ಷವಾಗಿರುವ ದಿ ಎಸಿಟಿ ನ್ಯೂಝಿಲೆಂಡ್ ಪಾರ್ಟಿಯು ಕಳೆದ ವಾರ ವೈಟಾಂಗಿ ಒಪ್ಪಂದದ ಕೆಲವು ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಮಸೂದೆಯ ಪ್ರತಿಯನ್ನು ಬಹಿರಂಗಗೊಳಿಸಿತ್ತು. ಆದರೆ, ಈ ನಡೆಗೆ ಹಲವು ಮವೋರಿ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.
1840ರಲ್ಲಿ ಮೊದಲಿಗೆ ಬ್ರಿಟಿಷ್ ಸಾಮ್ರಾಜ್ಯ ಹಾಗೂ 500ಕ್ಕೂ ಹೆಚ್ಚು ಮವೋರಿ ಮುಖ್ಯಸ್ಥರೊಂದಿಗೆ ಈ ಒಪ್ಪಂದವಾಗಿದ್ದು, ಎರಡೂ ಪಕ್ಷಗಳು ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ಈ ಒಪ್ಪಂದ ವಿವರಿಸುತ್ತದೆ. ಈ ಒಪ್ಪಂದದಲ್ಲಿನ ಪರಿಚ್ಛೇದಗಳ ವ್ಯಾಖ್ಯಾನವು ಈಗಲೂ ಶಾಸನ ಹಾಗೂ ನೀತಿ ನಿರೂಪಣೆಯನ್ನು ಮುನ್ನಡೆಸುತ್ತಿದೆ.
ಆದರೆ, ಪ್ರಸ್ತಾವಿತ ಮಸೂದೆಯಿಂದ ದೇಶದ ಮೂಲನಿವಾಸಿಗಳ ಹಕ್ಕುಗಳು ನೆಲಸಮಗೊಳ್ಳುತ್ತವೆ ಎಂದು ಹಲವು ಮವೋರಿ ಸಂಸದರು ಹಾಗೂ ಅವರ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ನ್ಯೂಝಿಲೆಂಡ್ ನ ಒಟ್ಟು ಜನಸಂಖ್ಯೆಯಾದ 53 ಲಕ್ಷದ ಪೈಕಿ ಮವೋರಿ ಸಮುದಾಯದ ಜನಸಂಖ್ಯೆ ಶೇ. 20ರಷ್ಟಿದೆ.
ಪ್ರಸ್ತಾವಿತ ಮಸೂದೆಯ ಮೊದಲ ಓದಿಗೆ ಸಂಸತ್ತಿನಲ್ಲಿ ಅನುಮೋದನೆ ದೊರೆಯುತ್ತಿದ್ದಂತೆಯೆ, ನೂರಾರು ಜನರು ಒಂಬತ್ತು ದಿನಗಳ ಕಾಲ ಉತ್ತರ ನ್ಯೂಝಿಲೆಂಡ್ ನಿಂದ ರಾಷ್ಟ್ರ ರಾಜಧಾನಿ ವೆಲ್ಲಿಂಗ್ಟನ್ ವರೆಗೆ ಪ್ರತಿಭಟನಾರ್ಥ ಮೆರವಣಿಗೆ ನಡೆಸಿದ್ದರು.