ಉಕ್ರೇನ್ ಗಡಿ ಬಳಿ ಪರಮಾಣು ಶಸ್ತ್ರಾಸ್ತ್ರ ಕವಾಯತಿಗೆ ಪುಟಿನ್ ಆದೇಶ
ಮಾಸ್ಕೋ: ಉಕ್ರೇನ್ ಗಡಿಯ ಬಳಿ ನೌಕಾಪಡೆ ಮತ್ತು ಭೂಸೇನೆಯನ್ನು ಒಳಗೊಂಡ ಪರಮಾಣು ಶಸ್ತ್ರಾಸ್ತ್ರ ಕವಾಯತು ನಡೆಸುವಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶಿಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಸೋಮವಾರ ಹೇಳಿದೆ.
ವಾಯುಪಡೆ ಮತ್ತು ನೌಕಾಪಡೆಗಳು, ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಮಿಲಟಿರಿ ನೆಲೆಯ ಯೋಧರು ಪಾಲ್ಗೊಳ್ಳಲಿದ್ದಾರೆ. ಕವಾಯತಿನ ಸಂದರ್ಭದಲ್ಲಿ ಕಾರ್ಯತಂತ್ರೇತರ(ಕಾರ್ಯತಂತ್ರವಲ್ಲದ) ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಬಳಕೆಯನ್ನು ಅಭ್ಯಾಸ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕವಾಯತು ಸದ್ಯದಲ್ಲೇ ನಡೆಯಲಿದೆ. ಕೆಲವು ಪಾಶ್ಚಿಮಾತ್ಯ ಅಧಿಕಾರಿಗಳ ಬೆದರಿಕೆಯ ಹಿನ್ನೆಲೆಯಲ್ಲಿ ರಶ್ಯದ ಪ್ರಾದೇಶಿಕ ಸಮಗ್ರತೆಯನ್ನು ಖಾತರಿಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.
ಉಕ್ರೇನ್‍ಗೆ ನೇಟೊ ಪಡೆಗಳನ್ನು ರವಾನಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ಸೇರಿದಂತೆ ಹಲವು ಪಾಶ್ಚಿಮಾತ್ಯ ಮುಖಂಡರ ಹೇಳಿಕೆಗೆ ಪ್ರತಿಯಾಗಿ ರಶ್ಯ ಈ ಕ್ರಮ ಕೈಗೊಂಡಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳು ಎಂದೂ ಕರೆಯಲ್ಪಡುವ ಕಾರ್ಯತಂತ್ರೇತರ ಪರಮಾಣು ಶಸ್ತ್ರಾಸ್ತ್ರಗಳನ್ನು ಯುದ್ಧಭೂಮಿಯಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಕ್ಷಿಪಣಿಯ ಮೂಲಕ ತಲುಪಿಸಬಹುದು. ಉಕ್ರೇನ್ ಬಿಕ್ಕಟ್ಟು ಆರಂಭವಾದಂದಿನಿಂದಲೂ ಪರಮಾಣು ಶಸ್ತ್ರಾಸ್ತ್ರದ ಬಗ್ಗೆ ಪುಟಿನ್ ಉಲ್ಲೇಖಿಸುತ್ತಾ ಬಂದಿದ್ದು ಪರಮಾಣು ಯುದ್ಧದ ನೈಜ ಅಪಾಯವಿದೆ ಎಂದು ಫೆಬ್ರವರಿಯಲ್ಲಿ ಎಚ್ಚರಿಕೆ ನೀಡಿದ್ದರು.