ರಶ್ಯ ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಬೆಂಬಲಿಸಲು ಬದ್ಧ : ಅಮೆರಿಕ ಪುನರುಚ್ಚಾರ
ಕೀವ್: ಮಂಗಳವಾರ ಉಕ್ರೇನ್‍ಗೆ ಆಗಮಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ತೀವ್ರಗೊಳ್ಳುತ್ತಿರುವ ರಶ್ಯದ ದಾಳಿಗಳ ವಿರುದ್ಧ ರಕ್ಷಿಸಿಕೊಳ್ಳಲು ಉಕ್ರೇನ್‍ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
`ಇದು ಸವಾಲಿನ ಸಮಯವೆಂದು ನಮಗೆ ತಿಳಿದಿದೆ. ಸಂಸತ್‍ನ ಅನುಮೋದನೆ ಪಡೆದಿರುವ ಅಮೆರಿಕದ 60 ಶತಕೋಟಿ ಡಾಲರ್ ನೆರವಿನ ಪ್ಯಾಕೇಜ್‍ನ ಮೊದಲ ಹಂತ ಈಗಾಗಲೇ ಉಕ್ರೇನ್ ತಲುಪುವ ಹಾದಿಯಲ್ಲಿದೆ. ಈ ನೆರವು ಯುದ್ಧರಂಗದ ಪರಿಸ್ಥಿತಿಯಲ್ಲಿ ನಿಜವಾಗಿಯೂ ಬದಲಾವಣೆಗೆ ಕಾರಣವಾಗಲಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ರಾಜಧಾನಿ ಕೀವ್‍ನಲ್ಲಿ ಬ್ಲಿಂಕೆನ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ಉಕ್ರೇನ್ ಅನ್ನು ಆಕ್ರಮಿಸುವ ಶತ್ರುಪಡೆಯ ಯೋಜನೆ ಎಂದಿಗೂ ಫಲಿಸುವುದಿಲ್ಲ. ಅಮೆರಿಕದ ನೆರವಿನ ಪ್ಯಾಕೇಜ್‍ನಡಿ ವಾಯುರಕ್ಷಣಾ ವ್ಯವಸ್ಥೆ, ದೀರ್ಘಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಈಗಾಗಲೇ ಉಕ್ರೇನ್‍ನ ಬತ್ತಳಿಕೆಯನ್ನು ಸೇರಿವೆ ಎಂದರು.