ಗಾಝಾದ ಮೇಲೆ ಇಸ್ರೇಲ್ ಅಣುಬಾಂಬ್ ಹಾಕಬೇಕು : ಅಮೆರಿಕದ ಸೆನೆಟರ್ ಹೇಳಿಕೆ!
PC : NDTV
ವಾಷಿಂಗ್ಟನ್: ಯೆಹೂದಿ ದೇಶದ ಅಸ್ತಿತ್ವ ಉಳಿಸಿಕೊಳ್ಳಲು ಅಗತ್ಯವಿರುವುದನ್ನು ಇಸ್ರೇಲ್ ಮಾಡಬೇಕು. ಗಾಝಾದ ಮೇಲೆ ಇಸ್ರೇಲ್ ಪರಮಾಣು ಬಾಂಬ್ ದಾಳಿ ನಡೆಸಿದರೆ ಅದನ್ನು ತಪ್ಪು ಎನ್ನಲಾಗದು ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಪಾನ್ನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಬಾಂಬ್ ಹಾಕಿದ್ದರಿಂದ ಎರಡನೇ ವಿಶ್ವಯುದ್ಧ ಅಂತ್ಯಗೊಂಡಿತು. ಬಾಂಬ್ ದಾಳಿ ನಡೆಸಿದ್ದು ಸರಿಯಾದ ನಿರ್ಧಾರವಾಗಿತ್ತು. ಈಗ ಗಾಝಾದಲ್ಲೂ ಹೀಗೆಯೇ ಆಗುವುದಾದರೆ ಇಸ್ರೇಲ್ಗೆ ಅಗತ್ಯವಿರುವ ಬಾಂಬ್ಗಳನ್ನು ಅಮೆರಿಕ ಒದಗಿಸಬೇಕು. ದಾಳಿಯಲ್ಲಿ ಕನಿಷ್ಠ ಸಾವು-ನೋವು ಸಂಭವಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಹಾಂ ಲಿಂಡ್ಸೆ ಹೇಳಿದ್ದಾರೆ.
ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ನಡೆಸಿದ್ದ ಅಣುಬಾಂಬ್ ದಾಳಿಯಲ್ಲಿ ಸುಮಾರು 2 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ರಫಾದ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದರೆ ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿಲುವಿಗೆ ತನ್ನ ವಿರೋಧವಿದೆ ಎಂದ ಲಿಂಡ್ಸೆ, ಗಾಝಾದಲ್ಲಿನ ನಿವಾಸಿಗಳನ್ನು ಹಮಾಸ್ ಮಾನವ ಗುರಾಣಿಯನ್ನಾಗಿ ಬಳಸುತ್ತಿದೆ ಎಂಬ ಆರೋಪವಿದೆ. ಇದನ್ನು ಹಮಾಸ್ ಮುಂದುವರಿಸುವ ತನಕ ಗಾಝಾದಲ್ಲಿ ನಾಗರಿಕರ ಸಾವು-ನೋವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ನಾಗರಿಕರನ್ನು ಅಪಾಯದಲ್ಲಿ ಸಿಲುಕಿಸಲು ಶತ್ರುಪಡೆಯ (ಹಮಾಸ್) ಇಂತಹ ನಿರ್ದಯ ಪ್ರಯತ್ನವನ್ನು ಯುದ್ಧದ ಇತಿಹಾಸದಲ್ಲೇ ನಾನು ನೋಡಿಲ್ಲ' ಎಂದು ಗ್ರಹಾಂ ಲಿಂಡ್ಸೆ ಹೇಳಿದ್ದಾರೆ.