ರಫಾದಲ್ಲಿ ವಿಶ್ವಸಂಸ್ಥೆ ಸಿಬ್ಬಂದಿ ಹತ್ಯೆ ಪ್ರಕರಣ | ವಿಶ್ವಸಂಸ್ಥೆಯಿಂದ ತನಿಖೆ ಆರಂಭ, ಸತ್ಯಶೋಧನಾ ಸಮಿತಿ ರಚನೆ
Photo : PTI
ವಿಶ್ವಸಂಸ್ಥೆ : ಸೋಮವಾರ ಗಾಝಾಪಟ್ಟಿಯ ರಫಾದಲ್ಲಿ ವಿಶ್ವಸಂಸ್ಥೆಯ ಕಾರಿನ ಮೇಲೆ ನಡೆದ ದಾಳಿಯಲ್ಲಿ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಸಿಬ್ಬಂದಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ವಿಶ್ವಸಂಸ್ಥೆ ತನಿಖೆ ಆರಂಭಿಸಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ವಕ್ತಾರರು ಹೇಳಿದ್ದಾರೆ.
ಸೋಮವಾರ ನಡೆದಿದ್ದ ದಾಳಿಯಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಅಧಿಕಾರಿ ಕ| ವೈಭವ್ ಕಾಳೆ ಸಾವನ್ನಪ್ಪಿದ್ದು ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದರು. ಇವರ ತಂಡವಿದ್ದ ಕಾರು ರಫಾದಲ್ಲಿನ ಯುರೋಪಿಯನ್ ಆಸ್ಪತ್ರೆಯತ್ತ ಸಾಗುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆದಿದೆ.
ದಾಳಿಯನ್ನು ಯಾರು ನಡೆಸಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಗೆ ಹೊಣೆಯನ್ನು ಗುರುತಿಸುವುದು ತನಿಖೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಸಹಾಯಕ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ. ಈಗಿನ್ನೂ ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಘಟನೆಯ ವಿವರವನ್ನು ಇಸ್ರೇಲ್ ರಕ್ಷಣಾ ಪಡೆಯೊಂದಿಗೆ ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ಗಾಝಾದಲ್ಲಿ ವಿಶ್ವಸಂಸ್ಥೆಯ 71 ಅಂತರಾಷ್ಟ್ರೀಯ ಸಿಬ್ಬಂದಿಗಳಿದ್ದಾರೆ ಎಂದವರು ಸ್ಪಷ್ಟಪಡಿಸಿದ್ದಾರೆ. ನಿವೃತ್ತ ಸೇನಾಧಿಕಾರಿ ಕರ್ನಲ್ ವೈಭವ್ ಕಾಳೆ ಮೃತಪಟ್ಟಿರುವುದನ್ನು ವಿಶ್ವಸಂಸ್ಥೆಗೆ ಭಾರತದ ನಿಯೋಗ ದೃಢಪಡಿಸಿದ್ದು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ರಫಾ ನಗರದ ಮೇಲೆ ಆಕ್ರಮಣ ನಡೆಸುವುದಾಗಿ ಘೋಷಿಸಿದ್ದ ಇಸ್ರೇಲ್ ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಿತ್ತು. ಮೇ 6ರಿಂದ ಸುಮಾರು 4,50,000 ನಿವಾಸಿಗಳು ರಫಾದಿಂದ ಸ್ಥಳಾಂತರಗೊಂಡಿರುವುದಾಗಿ ಗಾಝಾದಲ್ಲಿನ ವಿಶ್ವಸಂಸ್ಥೆಯ ನೆರವು ವಿತರಿಸುವ ಏಜೆನ್ಸಿ ಅಂದಾಜು ಮಾಡಿದೆ. ಮಂಗಳವಾರ ದಕ್ಷಿಣ ಗಾಝಾದ ರಫಾದ ಮೇಲೆ ಇಸ್ರೇಲ್ ಪಡೆಗಳು ತೀವ್ರ ಫಿರಂಗಿ ಮತ್ತು ಬಾಂಬ್ ದಾಳಿ ನಡೆಸಿವೆ.
ಕರ್ನಲ್ ಕಾಳೆ ಸಾವನ್ನಪ್ಪಿದ ಬಗ್ಗೆ ಸಂತಾಪ ಸೂಚಿಸಿದ್ದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ , ಗಾಝಾದಲ್ಲಿನ ಸಂಘರ್ಷವು ನಾಗರಿಕರ ಮೇಲೆ ಮಾತ್ರವಲ್ಲ ಮಾನವೀಯ ನೆರವು ವಿತರಿಸುವ ಕಾರ್ಯಕರ್ತರ ಮೇಲೆಯೂ ಪರಿಣಾಮ ಬೀರಿದ್ದು ವ್ಯಾಪಕ ಸಾವು-ನೋವಿಗೆ ಕಾರಣವಾಗಿದೆ ಎಂದು ಖಂಡಿಸಿದ್ದರು.