ತಾತ್ಕಾಲಿಕ ಧಕ್ಕೆಯ ಮೂಲಕ ಗಾಝಾಕ್ಕೆ ನೆರವು ಒದಗಿಸಿದ ಅಮೆರಿಕ
ನ್ಯೂಯಾಕ, ಮೇ 17: ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶಗಳಿಗೆ ಮಾನವೀಯ ನೆರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಾಝಾದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಧಕ್ಕೆ(ಹಡಗು ಕಟ್ಟೆ)ಯ ಮೂಲಕ ನೆರವು ಪೂರೈಕೆ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ಅಮೆರಿಕದ ಮಿಲಿಟರಿ ಶುಕ್ರವಾರ ಹೇಳಿದೆ.
ಶುಕ್ರವಾರ ಬೆಳಿಗ್ಗೆ 9 ಗಂಟೆಗೆ (ಸ್ಥಳೀಯ ಕಾಲಮಾನ) ಮಾನವೀಯ ನೆರವನ್ನು ಹೊತ್ತ ಟ್ರಕ್‍ಗಳು ಗಾಝಾವನ್ನು ಪ್ರವೇಶಿಸಿವೆ. ಇದಕ್ಕೆ ಬೆಂಗಾವಲಾಗಿ ಅಮೆರಿಕದ ತುಕಡಿಗಳು ಇರಲಿಲ್ಲ. ಇದು ಸಂಪೂರ್ಣ ಮಾನವೀಯ ಉದ್ದೇಶದ ಬಹುರಾಷ್ಟ್ರೀಯ ಕಾರ್ಯಾಚರಣೆಯಾಗಿದೆ . ಮುಂದಿನ ದಿನಗಳಲ್ಲಿ ಸುಮಾರು 500 ಟನ್‍ಗಳಷ್ಟು ನೆರವು ಫೆಲಸ್ತೀನ್ ಪ್ರದೇಶವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಇಸ್ರೇಲ್‍ನ ಮುತ್ತಿಗೆಗೆ ಒಳಗಾಗಿರುವ ಗಾಝಾ ಪ್ರದೇಶದಲ್ಲಿ ಆಹಾರ, ಶುದ್ಧ ನೀರು, ಔಷಧವಸ್ತುಗಳು ಹಾಗೂ ಇಂಧನಗಳ ತೀವ್ರ ಕೊರತೆಯಿದೆ. ಕಳೆದ ವಾರ ರಫಾ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಅನ್ನು ಇಸ್ರೇಲ್ ನಿಯಂತ್ರಣಕ್ಕೆ ಪಡೆದ ಬಳಿಕ ಅಂತರಾಷ್ಟ್ರೀಯ ನೆರವು ಪೂರೈಕೆ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಗಡಿದಾಟುಗಳನ್ನು ಮತ್ತೆ ತೆರೆದರೆ ಟ್ರಕ್‍ಗಳ ಮೂಲಕ ಗಾಝಾಕ್ಕೆ ತ್ವರಿತವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೆರವು ಒದಗಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.