ಇಸ್ರೇಲ್ನತ್ತ ಕ್ಷಿಪಣಿಗಳ ಮಳೆಗರೆದ ಹಮಾಸ್
► ಟೆಲ್ಅವೀವ್ ಸೇರಿದಂತೆ ಮಧ್ಯ ಇಸ್ರೇಲ್ನಲ್ಲಿ ಮೊಳಗಿದ ಸೈರನ್ ► ಯಹೂದಿಗಳಿಂದ `ನಾಗರಿಕರ ಹತ್ಯಾಕಾಂಡಕ್ಕೆ' ಪ್ರತೀಕಾರ: ಹಮಾಸ್
ಸಾಂದರ್ಭಿಕ ಚಿತ್ರ |Photo: PTI
ಟೆಲ್ಅವೀವ್ : ಗಾಝಾದಿಂದ ಇಸ್ರೇಲ್ನತ್ತ ಕ್ಷಿಪಣಿಗಳ ಮಳೆಗರೆದಿರುವುದಾಗಿ ಹಮಾಸ್ ಹೇಳಿಕೆ ನೀಡಿರುವಂತೆಯೇ ಇಸ್ರೇಲ್ ರಾಜಧಾನಿ ಟೆಲ್ಅವೀವ್ ಸೇರಿದಂತೆ ಮಧ್ಯ ಇಸ್ರೇಲ್ನಲ್ಲಿ ರಾಕೆಟ್ ಸೈರನ್ ಮೊಳಗಿದೆ ಎಂದು ರಾಯ್ಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಗಾಝಾ ಪಟ್ಟಿಯಿಂದ ಇಸ್ರೇಲ್ ಮೇಲೆ `ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿರವುದಾಗಿ ಹಮಾಸ್ನ ಸಶಸ್ತ್ರ ವಿಭಾಗ `ದಿ ಅಲ್-ಖಸಾಮ್ ಬ್ರಿಗೇಡ್' ಘೋಷಿಸಿದೆ. ಯೆಹೂದಿಗಳಿಂದ ನಡೆಯುತ್ತಿರುವ ನಾಗರಿಕರ `ಹತ್ಯಾಕಾಂಡಕ್ಕೆ' ಪ್ರತೀಕಾರವಾಗಿ ಕ್ಷಿಪಣಿ ದಾಳಿ ನಡೆದಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಹಮಾಸ್ನ ಅಲ್-ಅಖ್ಸಾ ಟಿವಿ ವರದಿ ಮಾಡಿದೆ. ಸುಮಾರು 4 ತಿಂಗಳುಗಳ ಬಳಿಕ ಇಸ್ರೇಲ್ನಲ್ಲಿ ಕ್ಷಿಪಣಿ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸುವ ಸೈರನ್ ಮೊಳಗಿದೆ.
ದಕ್ಷಿಣ ಗಾಝಾದ ರಫಾ ಪ್ರದೇಶದಿಂದ ಇಸ್ರೇಲ್ನತ್ತ ಕನಿಷ್ಟ 8 ರಾಕೆಟ್ಗಳನ್ನು ಪ್ರಯೋಗಿಸಲಾಗಿದ್ದು ಇದರಲ್ಲಿ ಹಲವನ್ನು ಇಸ್ರೇಲ್ ತುಂಡರಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಕ್ಷಿಪಣಿ ದಾಳಿಯಲ್ಲಿ ಯಾವುದೇ ಸಾವು-ನೋವಿನ ವರದಿ ಲಭಿಸಿಲ್ಲ ಎಂದು ಇಸ್ರೇಲ್ನ ತುರ್ತು ವೈದ್ಯಕೀಯ ಸೇವಾ ಸಂಸ್ಥೆ ಹೇಳಿದೆ. ಗಾಝಾಕ್ಕೆ ದಕ್ಷಿಣ ಇಸ್ರೇಲ್ನಿಂದ ಹೊಸ ಮಾರ್ಗದ ಮೂಲಕ ಆಹಾರ ವಸ್ತುಗಳ ಪೂರೈಕೆ ಆರಂಭಗೊಳ್ಳುತ್ತಿದ್ದಂತೆಯೇ ಹಮಾಸ್ನ ಕ್ಷಿಪಣಿ ದಾಳಿ ನಡೆದಿದೆ. ಗಾಝಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿದಾಟಿನ ಮೂಲಕ ಆಹಾರ ನೆರವು ಹೊತ್ತ ಟ್ರಕ್ಗಳ ಸಾಗಣೆಗೆ ಅವಕಾಶ ನೀಡಬೇಕಿದ್ದರೆ, ರಫಾದ ಬದಿಯಿರುವ ಗಡಿದಾಟಿನ ನಿಯಂತ್ರಣವನ್ನು ಫೆಲೆಸ್ತೀನೀಯರಿಗೆ ವಹಿಸಬೇಕು(ಈಗ ಇಸ್ರೇಲ್ ಸೇನೆಯ ನಿಯಂತ್ರಣದಲ್ಲಿದೆ) ಎಂದು ಈಜಿಪ್ಟ್ ಷರತ್ತು ವಿಧಿಸಿದ ಬಳಿಕ ರಫಾ ಗಡಿದಾಟಿನ ಬದಲು ಕೆರೆಮ್ ಶಲೋಮ್ ಗಡಿದಾಟು ಮೂಲಕ ನೆರವು ಹೊತ್ತ ಟ್ರಕ್ಗಳು ರಫಾ ಪ್ರವೇಶಿಸಿವೆ ಎಂದು ವರದಿಯಾಗಿದೆ. ಆದರೆ ರಫಾದಲ್ಲಿ ಯುದ್ಧ ಮುಂದುವರಿದಿರುವ ಕಾರಣ ಅಂತರಾಷ್ಟ್ರೀಯ ಮಾನವೀಯ ನೆರವು ಗುಂಪಿಗೆ ಆಹಾರ ನೆರವು ವಿತರಿಸಲು ಸಮಸ್ಯೆಯಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ರಫಾದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಟ 5 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಇಸ್ರೇಲಿ ಸೈನಿಕರ ಅಪಹರಣ | ಹಮಾಸ್ ಪ್ರತಿಪಾದನೆ
ಗಾಝಾ : ಉತ್ತರ ಗಾಝಾದ ಜಬಾಲಿಯಾದಲ್ಲಿ ರವಿವಾರ ನಡೆದ ಯುದ್ಧದ ಸಂದರ್ಭ ಇಸ್ರೇಲ್ನ ಸೈನಿಕರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಮಾಸ್ನ ಸಶಸ್ತ್ರ ವಿಭಾಗದ ವಕ್ತಾರರು ಹೇಳಿದ್ದಾರೆ. ಆದರೆ ಇದನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.
`ನಮ್ಮ ಹೋರಾಟಗಾರರು ಯೆಹೂದಿ ಪಡೆಯನ್ನು ಸುರಂಗದೊಳಗೆ ಹೊಂಚುದಾಳಿಯಲ್ಲಿ ಸಿಲುಕಿಸಿದರು. ಯೆಹೂದಿ ಪಡೆಯ ಹಲವರು ಮೃತಪಟ್ಟರೆ ಇನ್ನು ಕೆಲವರು ಗಾಯಗೊಂಡರು. ಹಲವರನ್ನು ಸೆರೆಹಿಡಿಯಲಾಗಿದೆ ಎಂದು ಅಲ್ ಖಸಾಮ್ ಬ್ರಿಗೇಡ್ನ ವಕ್ತಾರ ಅಬು ಉಬೈದಾ ನೀಡಿದ ಹೇಳಿಕೆಯನ್ನು ಅಲ್ಜಝೀರಾ ಟಿವಿ ರವಿವಾರ ಬೆಳಿಗ್ಗೆ ಪ್ರಸಾರ ಮಾಡಿದೆ. ಇದನ್ನು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ನಿರಾಕರಿಸಿದೆ. `ನಮ್ಮ ಯಾವುದೇ ಯೋಧನನ್ನು ಅಪಹರಿಸಲಾಗಿಲ್ಲ' ಎಂದು ಐಡಿಎಫ್ ಹೇಳಿದೆ. ಈ ಮಧ್ಯೆ, ಸುರಂಗವೊಂದರಲ್ಲಿ ಸಂಘರ್ಷದ ಬಳಿಕ ರಕ್ತಸಿಕ್ತವಾದ ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ಈ ಮಧ್ಯೆ, ಗಾಝಾದಲ್ಲಿ ಕದನ ವಿರಾಮ ಜಾರಿಯ ಕುರಿತ ಮಾತುಕತೆ ಮುಂದಿನ ವಾರ ಮುಂದುವರಿಯಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.