ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಶಸ್ತ್ರಾಸ್ತ್ರ ಪೂರೈಕೆಗೆ ರಶ್ಯ ಸಿದ್ಧ : ಪುಟಿನ್ ಎಚ್ಚರಿಕೆ
“ಉಕ್ರೇನ್ಗೆ ಶಸ್ತ್ರಾಸ್ತ್ರ ನೆರವು ಮುಂದುವರೆಸಿದರೆ ಕ್ರಮ”
ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ : ಒಂದು ವೇಳೆ ಉಕ್ರೇನ್ ಯುದ್ಧವನ್ನು ಪಾಶ್ಚಾತ್ಯ ರಾಷ್ಟ್ರಗಳು ಉಲ್ಬಣಗೊಳಿಸುವುದನ್ನು ಮುಂದುವರೆಸಿದರೆ, ಅದರಿಂದಾಗಿ ಅಂತರರಾಷ್ಟ್ರೀಯ ಬಾಂಧವ್ಯಗಳು ಸಂಪೂರ್ಣವಾಗಿ ನಾಶವಾಗಲಿದೆ. ಅಂತರರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಲಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿ ಮಿರ್ ಪುಟಿನ್ ಹೇಳಿದ್ದಾರೆ.
ರಶ್ಯದ ಭೂಪ್ರದೇಶದ ಮೇಲೆ ಉಕ್ರೇನ್ ಸೇನೆ ಪಾಶ್ಚಾತ್ಯ ರಾಷ್ಟ್ರಗಳು ಪೂರೈಕೆ ಮಾಡಿದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ರಶ್ಯವು ಪಾಶ್ಚಾತ್ಯ ರಾಷ್ಟ್ರಗಳ ವಿರೋಧಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಅಸಾಮಾನ್ಯವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಸ್ಕೊ ಪರಿಶೀಲಿಸುತ್ತಿದೆಯೆಂದು ಅವರು ಹೇಳಿದರು.
ಸೈಂಟ್ಪೀಟರ್ಸ್ಬರ್ಗ್ನಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಆರ್ಥಿಕ ವೇದಿಕೆ (ಎಸ್ಪಿಐಇಎಫ್)ನ ನೇಪಥ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಶ್ಯದೊಳಗೆ ಉಕ್ರೇನ್ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಬಸಿರುವುದನ್ನು ಅಮೆರಿಕದ ಸೆನೆಟರ್ ಹಾಗೂ ಪಾಶ್ಚಾತ್ಯ ಅಧಿಕಾರಿಯೊಬ್ಬರು ದೃಢಪಡಿಸಿದ ಬೆನ್ನಲ್ಲೆ ಪುಟಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ ಒಂದು ವೇಳೆ ಯಾವುದೇ ದೇಶವಾದರೂ ನಮ್ಮ ಪ್ರಾಂತದ ಮೇಲೆ ದಾಳಿ ನಡೆಸಲು ಯುದ್ಧವಲಯಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದೇ ಆದರೆ, ಆಂತಹ ದೇಶಗಳ ಸೂಕ್ಷ್ಮ ಸಂವೇದಿ ನೆಲೆಗಳ ವಿರುದ್ಧ ದಾಳಿಗಳನ್ನು ನಡೆಸಲು ಜಗತ್ತಿನ ಆ ಪ್ರದೇಶಗಳಿಗೆ ಅಂತಹದೇ ಶಸ್ತ್ರಾಸ್ತ್ರಗಳನ್ನು ನಾವು ಯಾಕೆ ಪೂರೈಕೆ ಮಾಡಬಾರದು” ಎಂದು ರಶ್ಯ ಅಧ್ಯಕ್ಷರು ಪ್ರಶ್ನಿಸಿದರು.
“ನಮ್ಮ ವಿರುದ್ಧದ ಸಮರದಲ್ಲಿ ಈ ದೇಶಗಳನ್ನು ಎಳೆದುತಂದಲ್ಲಿ, ರಶ್ಯದ ವಿರುದ್ಧದ ಯುದ್ಧದಲ್ಲಿ ಅವು ನೇರವಾಗಿ ಪಾಲ್ಗೊಂಡಂತಾಗುತ್ತದೆ. ಈಗ ನಾವು ಅದೇ ರೀತಿಯಾಗಿ ವರ್ತಿಸುವ ಹಕ್ಕನ್ನು ಕಾಯ್ದುಕೊಳ್ಳುತ್ತೇವೆ. ಅತ್ಯಂತ ಗಂಭೀರ ಸಮಸ್ಯೆಗಳಿಗೆ ಇದೇ ಮದ್ದಾಗಿರುತ್ತದೆ’’ ಎಂದು ಪುಟಿನ್ ಎಚ್ಚರಿಕೆ ನೀಡಿದರು.