ಭಾರತ ನೀತಿಯ ಮರುಪರಿಶೀಲನೆ | ಸರಕಾರದ ಕ್ರಮಕ್ಕೆ ಮಾಲ್ದೀವ್ಸ್ ವಿಪಕ್ಷ ಸ್ವಾಗತ
PC : X/@Dr. S. Jaishankar ಮಾಲ್ದೀವಿಯನ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ,ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್
ಮಾಲೆ : ಅಧ್ಯಕ್ಷ ಮುಹಮ್ಮದ್ ಮುಯಿಜ್ಜು ನೇತೃತ್ವದ ಸರಕಾರದಿಂದ ಭಾರತ ನೀತಿಯ ಮರುಪರಿಶೀಲನೆಯನ್ನು ಪ್ರಮುಖ ವಿಪಕ್ಷ ಮಾಲ್ದೀವಿಯನ್ ಡೆಮೊಕ್ರಟಿಕ್ ಪಕ್ಷ ಸ್ವಾಗತಿಸಿದ್ದು ತುರ್ತು ಅಗತ್ಯದ ಸಂದರ್ಭದಲ್ಲಿ ಯಾವತ್ತೂ ಭಾರತವೇ ಮೊದಲು ನೆರವಿನ ಹಸ್ತ ಚಾಚಿದೆ ಎಂದು ಹೇಳಿದೆ.
ಶನಿವಾರ ರಾಜಧಾನಿ ಮಾಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಭೇಟಿಯಾದ ಬಳಿಕ ಮಾಲ್ದೀವಿಯನ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಹಾಗೂ ಮಾಲ್ದೀವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ `ನನ್ನ ಮಾಜಿ ಸಹೋದ್ಯೋಗಿಯನ್ನು ಆತ್ಮೀಯವಾಗಿ ಸ್ವಾಗತಿಸಲು ಮತ್ತು ಭೇಟಿಯಾಗಲು ತುಂಬಾ ಸಂತೋಷವಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
`ಯಾವುದೇ ಸಮಯದಲ್ಲಿ ಮಾಲ್ದೀವ್ಸ್ ಅಂತರರಾಷ್ಟ್ರೀಯ 911 ಸಂಖ್ಯೆಗೆ ಕರೆ ಮಾಡಿದರೂ ಅದಕ್ಕೆ ಪ್ರಥಮವಾಗಿ ಸ್ಪಂದಿಸುವುದು ಭಾರತ ಎಂಬ ಬಗ್ಗೆ ಮಾಲ್ದೀವ್ಸ್ ಗೆ ನಂಬಿಕೆಯಿದೆ. ದೇಶದ ಪ್ರಸಕ್ತ ಸರಕಾರವು ಆರಂಭದಲ್ಲಿ ಆಕ್ರಮಣಕಾರಿ ಘೋಷಣೆ, ಲೇವಡಿಯ ಮಾತುಗಳ ಮೂಲಕ ಮತ್ತು ವಿಶ್ವಾಸಾರ್ಹ ಮಿತ್ರ ಹಾಗೂ ಅಭಿವೃದ್ಧಿಯ ಪಾಲುದಾರನನ್ನು ಬೆದರಿಸುವ ದೇಶವೆಂದು ಟೀಕಿಸಿತ್ತು. ಇದು ಮಾಲ್ದೀವ್ಸ್ ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸಿತ, ಆರ್ಥಿಕ ನಷ್ಟ, ಅನಗತ್ಯ ತೊಂದರೆ, ಸವಾಲುಗಳನ್ನು ತಂದೊಡ್ಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಯಿಝ್ಝು ಸರಕಾರ ಮಾಲ್ದೀವ್ಸ್-ಭಾರತ ನೀತಿಯನ್ನು ಹಠಾತ್ ಮರು ಪರಿಶೀಲಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ' ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಅಧ್ಯಕ್ಷರಾಗಿ ಮುಯಿಝ್ಝು ಅಧಿಕಾರ ವಹಿಸಿಕೊಂಡಂದಿನಿಂದ ಮಾಲ್ದೀವ್ಸ್ ನೊಂದಿಗಿನ ಭಾರತದ ಸಂಬಂಧ ತೀವ್ರ ಒತ್ತಡಕ್ಕೆ ಒಳಗಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ, ಭಾರತವು ಮಾಲ್ದೀವ್ಸ್ ಗೆ ಕೊಡುಗೆಯಾಗಿ ನೀಡಿದ್ದ ಮೂರು ವಾಯುಯಾನ ವೇದಿಕೆಗಳಿಂದ ಸೇನಾ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಳ್ಳಬೇಕೆಂದು ಮುಯಿಝ್ಝು ಭಾರತಕ್ಕೆ ಸೂಚಿಸಿದ್ದರು. ತಮ್ಮ ಚೀನಾ ಪರ ನಿಲುವಿನಿಂದ ಹಿಂದೆ ಸರಿಯುವ ಸಂಕೇತ ನೀಡಿರುವ ಮುಯಿಝ್ಝು, ಶನಿವಾರ ನೀಡಿದ ಹೇಳಿಕೆಯಲ್ಲಿ ` ಭಾರತವು ಯಾವತ್ತೂ ಮಾಲ್ದೀವ್ಸ್ ನ ನಿಕಟ ಮಿತ್ರ ಹಾಗೂ ಅಮೂಲ್ಯ ಪಾಲುದಾರನಾಗಿಯೇ ಉಳಿದಿದೆ ಮತ್ತು ತಮ್ಮ ದೇಶಕ್ಕೆ ಯಾವಾಗ ಅಗತ್ಯಬಿದ್ದರೂ ನೆರವಿನ ಹಸ್ತ ಚಾಚಿದೆ ಎಂದು ಹೇಳಿಕೆ ನೀಡಿದ್ದರು.