ನೆದರ್ಲ್ಯಾಂಡ್ | ಇಸ್ರೇಲ್ ಫುಟ್ಬಾಲ್ ತಂಡದ ಆಟಗಾರರ ಮೇಲೆ ಹಲ್ಲೆ
PC : PTI
ಆಮ್ಸ್ಟರ್ಡಾಂ : ನೆದರ್ಲ್ಯಾಂಡ್ನಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಇಸ್ರೇಲ್ನ ತಂಡದ ಆಟಗಾರರು ಹಾಗೂ ಅಭಿಮಾನಿಗಳ ಮೇಲೆ ಹಲ್ಲೆ ನಡೆದಿರುವುದಾಗಿ ವರದಿಯಾಗಿದೆ.
ಸ್ಥಳೀಯ ಫುಟ್ಬಾಲ್ ತಂಡದ ವಿರುದ್ಧ ಇಸ್ರೇಲ್ನ ಮಕಾಬಿ ಕ್ಲಬ್ ತಂಡ ಸೋತಿತ್ತು. ಪಂದ್ಯದ ಬಳಿಕ ಆಟಗಾರರು ಮೈದಾನದಿಂದ ಹೊರಗೆ ತೆರಳುತ್ತಿದ್ದಾಗ ಮೈದಾನದ ಹೊರಗಡೆ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನವರು ಇಸ್ರೇಲ್ ಆಟಗಾರರು ಹಾಗೂ ತಂಡದ ಅಭಿಮಾನಿಗಳನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ. `ಫೆಲೆಸ್ತೀನ್ ಅನ್ನು ಮುಕ್ತಗೊಳಿಸಿ' ಎಂಬ ಬ್ಯಾನರ್ ಹಿಡಿದಿದ್ದ ಪ್ರತಿಭಟನಾಕಾರರು ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ.
ನಾಗರಿಕರನ್ನು ಸ್ಥಳಾಂತರಿಸಲು ವಿಮಾನಗಳನ್ನು ಕಳುಹಿಸಲು ಇಸ್ರೇಲ್ ಸರಕಾರ ನಿರ್ಧರಿಸಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಹಲ್ಲೆಯನ್ನು ಖಂಡಿಸಿರುವ ವಿಪಕ್ಷ ಮುಖಂಡ ಯಾಯಿರ್ ಲ್ಯಾಪಿಡ್ `ಆಮ್ಸ್ಟರ್ಡಾಂನ ದೃಶ್ಯಗಳು ನಮಗೆ ಯುರೋಪ್ನ ಕರಾಳ ದಿನಗಳನ್ನು ನೆನಪಿಸಿದೆ. ಇಸ್ರೇಲ್ ಪ್ರಜೆಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ನೆದರ್ಲ್ಯಾಂಡ್ ಸರಕಾರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು' ಎಂದವರು ಆಗ್ರಹಿಸಿದ್ದಾರೆ.