ಟ್ರಂಪ್ ಗೆಲುವನ್ನು ವಿರೋಧಿಸಿ ಅಮೆರಿಕದ ವಿವಿಧೆಡೆ ಪ್ರತಿಭಟನೆ
ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್ :ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಗೆಲುವನ್ನು ವಿರೋಧಿಸಿ ಅಮೆರಿಕದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿದೆ. ಶನಿವಾರ ನ್ಯೂಯಾರ್ಕ್ ನಿಂದ ಹಿಡಿದು ಸಿಯಾಟಲ್ ನಗರವರೆಗೆ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿರುವುದಾಗಿ ವರದಿಯಾಗಿದೆ.
ಟ್ರಂಪ್ ಆಳ್ವಿಕೆಯಲ್ಲಿ ನಿರಾಶ್ರಿತರು, ವಲಸಿಗರು ಮತ್ತಿತರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ನೂರಾರು ಮಂದಿ ಪ್ರತಿಭಟನಕಾರರ ನ್ಯೂಯಾರ್ಕ್ ನ ಟ್ರಂಪ್ ಇಂಟರ್ ನ್ಯಾಶನಲ್ ಹೋಟೆಲ್ ಮುಂದೆ ಧರಣಿ ನಡೆಸಿದರು.
ರಾಜಧಾನಿ ವಾಶಿಂಗ್ಟನ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಟ್ರಂಪ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಟ್ರಂಪ್ ನೀತಿಗಳು ಮಹಿಳಾ ವಿರೋಧಿಯಾಗಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸ್ತ್ರೀಯರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿದರು.
ಇತ್ತ ಸಿಯಾಟಲ್ ನಲ್ಲಿ ಜನಾಂಗೀಯ ಹತ್ಯೆ, ಯುದ್ಧ ವಿರೋಧಿ ಪ್ರತಿಭಟನೆಗಳು ನಡೆದಿವೆ. ಶುಕ್ರವಾರವೂ ಅಮೆರಿಕದ ವಿವಿಧೆಡೆ ಟ್ರಂಪ್ ಆಯ್ಕೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಪೋರ್ಟ್ಲ್ಯಾಂಡ್ ನ ಸಿಟಿಬಹಾಲ್ ಸಮೀಪ ಜನರು ಪ್ರತಿಭಟನೆ ನಡೆಸಿದ್ದು, ಫ್ಯಾಶಿಸಂ ವಿರುದ್ಧ ಘೋಷಣೆಗಳನ್ನು ಕೂಗಿದರು.