ಬಾಂಗ್ಲಾ ವಿಜಯ ದಿನ: ಮೋದಿ ಪೋಸ್ಟ್ ಗೆ ಬಾಂಗ್ಲಾ ಪ್ರತಿಭಟನೆ
ಢಾಕಾ: ಬಾಂಗ್ಲಾದೇಶದ ವಿಜಯ ದಿನ ಕುರಿತಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಕಾನೂನು ಸಲಹೆಗಾರ ಆಸೀಫ್ ನಝ್ರುಲ್ ಬಲವಾಗಿ ಖಂಡಿಸಿದ್ದಾರೆ.
"ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ. ಡಿಸೆಂಬರ್ 16, 1971, ಬಾಂಗ್ಲಾದೇಶದ ವಿಜಯ ದಿನ. ಭಾರತ ಈ ವಿಜಯದ ಮಿತ್ರರಾಷ್ಟ್ರವೇ ವಿನಃ ಹೆಚ್ಚಿನದೇನೂ ಆಗಿರಲಿಲ್ಲ" ಎಂದು ಮೋದಿಯವರ ಫೇಸ್ಬುಕ್ ಪೋಸ್ಟ್ನ ಸ್ಕ್ರೀನ್ಶಾಟ್ನೊಂದಿಗೆ ಆಸೀಫ್ ನಝ್ರುಲ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
"1971ರಲ್ಲಿ ಭಾರತದ ಐತಿಹಾಸಿಕ ಜಯಕ್ಕೆ ಕೊಡುಗೆ ನೀಡಿದ ನಮ್ಮ ಕೆಚ್ಚೆದೆಯ ಸೈನಿಕರ ಸಾಹಸ ಮತ್ತು ತ್ಯಾಗವನ್ನು ನಾವು ವಿಜಯ ದಿವಸವಾದ ಇಂದು ಗೌರವಿಸುತ್ತಿದ್ದೇವೆ. ಅವರ ನಿಸ್ವಾರ್ಥ ಸಮರ್ಪಣಾ ಮನೋಭಾವ ಮತ್ತು ಅಚಲವಾದ ದೃಢತೆ ನಮ್ಮ ದೇಶವನ್ನು ರಕ್ಷಿಸಿದೆ ಮತ್ತು ನಮಗೆ ಘನತೆಯನ್ನು ತಂದುಕೊಟ್ಟಿದೆ" ಎಂದು ಮೋದಿ ಬಣ್ಣಿಸಿದ್ದರು.
ಅವರ ಅದ್ಭುತ ಪರಾಕ್ರಮ ಮತ್ತು ಅವರ ದೃಢವಾದ ಸ್ಫೂರ್ತಿಗೆ ಇಂದು ನಾವು ಗೌರವ ಸಮರ್ಪಿಸುತ್ತಿದ್ದೇವೆ. ಅವರ ತ್ಯಾಗವು ಚಿರಕಾಲ ಹಲವು ಪೀಳಿಗೆಗಳಿಗೆ ಸ್ಫೂರ್ತಿ ಮತ್ತು ನಮ್ಮ ದೇಶದ ಇತಿಹಾಸದಲ್ಲಿ ಅದು ಆಳವಾಗಿ ಬೇರೂರಿದೆ" ಎಂದು ಹೇಳಿದ್ದರು.