ಕೆನಡಾದಿಂದ ತೊಲಗಿ | ಕೆನಡಿಯನ್ನರನ್ನೇ ಆಗ್ರಹಿಸಿದ ಖಾಲಿಸ್ತಾನ್ ಬೆಂಬಲಿಗರು
PC : PTI
ಒಟ್ಟಾವ : ಕೆನಡಾದಲ್ಲಿ ಭಾರತ ಹಾಗೂ ಭಾರತೀಯರ ವಿರುದ್ಧ ಕೆಂಡ ಕಾರುತ್ತಿದ್ದ ಖಾಲಿಸ್ತಾನೀಯರು ಇದೀಗ ಕೆನಡಿಯನ್ನರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇಂಗ್ಲೆಂಡ್ ಅಥವಾ ಯುರೋಪ್ ಗೆ ವಾಪಸಾಗಿ ಎಂದು ಕೆನಡಾ ಪ್ರಜೆಗಳನ್ನು ಆಗ್ರಹಿಸಿದ್ದಾರೆ.
ಕೆನಡಾದಲ್ಲಿ ನಡೆದ `ನಗರ ಕೀರ್ತನ' ಮೆರವಣಿಗೆಯ ಸಂದರ್ಭ ಖಾಲಿಸ್ತಾನ್ ಬೆಂಬಲಿಗರ ಗುಂಪೊಂದು ಕೆನಡಿಯನ್ನರನ್ನು `ಆಕ್ರಮಣಕಾರರು' ಎಂದು ಕರೆದಿರುವ ಮತ್ತು `ತಕ್ಷಣ ಇಂಗ್ಲೆಂಡ್ ಮತ್ತು ಯುರೋಪ್ಗೆ ಹಿಂತಿರುಗುವಂತೆ' ಆಗ್ರಹಿಸುವ ಎರಡು ನಿಮಿಷಗಳ ವೀಡಿಯೊ ವೈರಲ್ ಆಗಿದೆ. ಇದು ಕೆನಡಾ, ನಮ್ಮ ಸ್ವಂತ ದೇಶ. ನೀವು(ಕೆನಡಿಯನ್ನರು) ವಾಪಾಸು ಹೋಗಿ' ಎಂದು ಮೆರವಣಿಗೆಯ ಸಂದರ್ಭ ಘೋಷಣೆ ಕೂಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದು ಕೆನಡಾದಲ್ಲಿ ಸಾಮಾನ್ಯ ಘಟನೆಯಾಗಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ಪ್ರತಿಕ್ರಿಯಿಸಿದ್ದು` ಖಾಲಿಸ್ತಾನಿಗಳು ನಿಧಾನವಾಗಿ ದೇಶದ ಎಲ್ಲಾ ಹಂತಗಳನ್ನೂ ನಿಧಾನವಾಗಿ ವಶಕ್ಕೆ ಪಡೆಯುತ್ತಿದ್ದಾರೆ. ಸೂಕ್ತ ನಿಗಾ ವ್ಯವಸ್ಥೆಯ ಕೊರತೆಯಿಂದ ಈ ಗುಂಪು ಈಗ ಸ್ಥಳೀಯ ಕೆನಡಿಯನ್ನರ ಮೇಲೂ ನಿಯಂತ್ರಣ ಸಾಧಿಸುತ್ತಿದ್ದಾರೆ. ಭದ್ರತೆ ಬೇಕಿದ್ದರೆ ಹಣ ಪಾವತಿಸುವ ಪರಿಸ್ಥಿತಿ ಹಿಂದುಗಳಿಗೆ ಇದೆ. ಈಗ ಕೆನಡಾ ನಿವಾಸಿಗಳಿಗೆ ಅವರದೇ ದೇಶದಲ್ಲಿ ಅಪಾಯ ಎದುರಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.