ಸೇಡು ತೀರಿಸಿಕೊಳ್ಳಲು ಸೂಪ್ ಗೆ ವಿಷ ಬೆರೆಸಿದ ಮಹಿಳೆ: ಪ್ರಿಯತಮನೊಂದಿಗೆ ಇನ್ನೂ ನಾಲ್ವರು ಮೃತ್ಯುವಿನಲ್ಲಿ ಅಂತ್ಯ!
pc ; freepik.com
ಅಬುಜಾ: ತನ್ನ ಮಾಜಿ ಪ್ರಿಯತಮನ ಮೇಲೆ ಸೇಡು ತೀರಿಸಿಕೊಳ್ಳಲು ತಾನು ಸಿದ್ಧಪಡಿಸಿದ ಸೂಪ್ ಗೆ ಮಹಿಳೆಯೊಬ್ಬಳು ವಿಷ ಬೆರೆಸಿದ್ದು, ಆ ವಿಷಪೂರಿತ ಸೂಪ್ ಸೇವಿಸಿ ಒಟ್ಟು ಐದು ಮಂದಿ ಮೃತಪಟ್ಟಿರುವ ದಿಗ್ಭ್ರಮೆಗೊಳಿಸುವ ಘಟನೆ ನೈಜೀರಿಯದ ಎಡೊದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಮ್ಮ ನಡುವಿನ ಸಂಬಂಧ ಅಂತ್ಯಗೊಂಡಿದ್ದರಿಂದ ಕುಪಿತಗೊಂಡ ಮಹಿಳೆಯು, ತನ್ನ ಮಾಜಿ ಪ್ರಿಯತಮನಿಗೆ ವಿಷವುಣಿಸಲು ಬಯಸಿದ್ದಳು ಎಂದು ವರದಿಯಾಗಿದೆ. ತನ್ನ ಮಾಜಿ ಪ್ರಿಯತಮನಿಗಾಗಿ ಸಿದ್ಧಪಡಿಸಿದ್ದ ಸೂಪ್ ನಲ್ಲಿ ಮಹಿಳೆಯು ವಿಷ ಬೆರೆಸಿದ್ದಳು ಎನ್ನಲಾಗಿದೆ. ಮಹಿಳೆಯ ಉದ್ದೇಶ ತನ್ನ ಮಾಜಿ ಪ್ರಿಯತಮನನ್ನು ಮಾತ್ರ ಕೊಲ್ಲುವುದಾಗಿತ್ತಾದರೂ, ಆ ಸೂಪ್ ಅನ್ನು ಆತ ಇನ್ನಿತರ ನಾಲ್ವರೊಂದಿಗೆ ಹಂಚಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕೊಠಡಿಯಿಂದ ಐವರು ಹೊರ ಬರದೆ ಇದ್ದುದರಿಂದ ಸಂಶಯಗೊಂಡಿರುವ ಕುಟುಂಬದ ಸದಸ್ಯರು, ಕೊಠಡಿಯ ತಪಾಸಣೆ ನಡೆಸಿದಾಗ, ಎಲ್ಲ ಐವರೂ ಮೃತಪಟ್ಟಿರುವುದು ಪತ್ತೆಯಾಗಿದೆ.
ಇದರ ಬೆನ್ನಿಗೇ ಮಹಿಳೆಯನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮಹಿಳೆಯನ್ನು ತನ್ನ ವಶಕ್ಕೆ ಪಡೆದಿರುವ ನೈಜೀರಿಯ ಸೇನೆ, ಆಕೆಯನ್ನು ವಿಚಾರಣೆಗೊಳಪಡಿಸಿದೆ.