ನಿಜ್ಜಾರ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಬಿಡುಗಡೆ
PC : hindustantimes.com
ಒಟ್ಟಾವ: ಖಲಿಸ್ತಾನ್ ತೀವ್ರವಾದಿ ನಾಯಕ ಹರದೀಪ್ ಸಿಂಗ್ ನಿಜ್ಜಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಎಲ್ಲಾ ನಾಲ್ವರು ಭಾರತೀಯ ಪ್ರಜೆಗಳನ್ನು ಕೆನಡದ ನ್ಯಾಯಾಲಯವು ಬುಧವಾರ ಜಾಮೀನು ಬಿಡುಗಡೆಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ವಿಚಾರಣೆಯು ಮುಂದಿನ ತಿಂಗಳು ಆರಂಭಗೊಳ್ಳಲಿದೆ.
ನಿಜ್ಜಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕರಣ್ ಬ್ರಾರ್, ಕಮಲ್ಪ್ರೀತ್ ಬ್ರಾರ್, ಕರಣ್ಪ್ರೀತ್ ಸಿಂಗ್ ಹಾಗೂ ಅಮನ್ದೀಪ್ ಸಿಂಗ್ ಅವರನ್ನು ಕೆನಡ ಪೊಲೀಸರು ಕಳೆದ ವರ್ಷದ ಮೇನಲ್ಲಿ ಬಂಧಿಸಿದ್ದರು. ಕೊಲೆಯನ್ನು ನಡೆಸಿದ ಹಾಗೂ ಕೊಲೆಗೆ ಸಂಚು ಹೂಡಿದ ಆರೋಪಗಳನ್ನು ಇವರು ಎದುರಿಸುತ್ತಿದ್ದಾರೆ.
ಪ್ರಕರಣದ ವಿಚಾರಣೆಯು ಫೆಬ್ರವರಿ 11ರಂದು ಕೆನಡದ ಬ್ರಿಟಿಶ್ ಕೊಲಂಬಿಯಾ ಸುಪ್ರೀಂಕೋರ್ಟ್ ನ್ಯಾಯಾಲಯದಲ್ಲಿ ಆರಂಭವಾಗಲಿದ್ದು, ಅದಕ್ಕೆ ಮುಂಚಿತವಾಗಿ ಸರ್ರೆ ಪ್ರಾಂತೀಯ ನ್ಯಾಯಾಲಯವು ಜಾಮೀನು ಬಿಡುಗಡೆಗೊಳಿಸಿದೆ.
ಖಾಲಿಸ್ತಾನಿ ಉಗ್ರಗಾಮಿ ಹರದೀಪ್ ಸಿಂಗ್ ನಿಜ್ಜಾರ್ನನ್ನು 2023ರ ಜೂನ್ 18ರಂದು ಬ್ರಿಟಿಶ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರವೊಂದರ ಹೊರಗಡೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.ಅದೇ ವರ್ಷದ ಸೆಪ್ಟೆಂಬರ್ನಲ್ಲಿ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರಕಾರದ ಕೈವಾಡವಿದೆಯೆಂದು ಆಪಾದಿಸಿದ್ದರು. ಆದರೆ ಭಾರತವು ಅದನ್ನು ಸ್ಪಷ್ಟವಾಗಿ ನಿರಾಕರಿಸಿತ್ತು.