ಗಾಝಾದಲ್ಲಿ ಕದನವಿರಾಮವಿಲ್ಲ, ತಾತ್ಕಾಲಿಕ ಸ್ಥಳೀಯ ವಿರಾಮಗಳಷ್ಟೇ: ಇಸ್ರೇಲಿ ಸೇನೆ
Photo- PTI
ಜೆರುಸಲೇಂ: ಗಾಝಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಯಾವುದೇ ಕದನವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿಲ್ಲ, ಆದರೆ ಮಾನವೀಯ ನೆರವಿಗೆ ಅವಕಾಶ ಕಲ್ಪಿಸಲು ತಾತ್ಕಾಲಿಕ ಸ್ಥಳೀಯ ವಿರಾಮಗಳನ್ನು ಮುಂದುವರಿಸಲಿದೆ ಎಂದು ಇಸ್ರೇಲಿ ಸೇನೆಯು ತಿಳಿಸಿದೆ.
‘ಕದನವಿರಾಮದ ಪ್ರಶ್ನೆಯೇ ಇಲ್ಲ, ಮಾನವೀಯ ನೆರವು ಗಾಝಾವನ್ನು ತಲುಪುವಂತಾಗಲು ನಾಲ್ಕು ಗಂಟೆಗಳ ಸ್ಥಳೀಯ ವಿರಾಮಕ್ಕಷ್ಟೇ ನಾವು ಅವಕಾಶ ನೀಡುತ್ತಿದ್ದೇವೆ ’ಎಂದು ಸೇನೆಯ ವಕ್ತಾರ ರಿಚರ್ಡ್ ಹೆಟ್ ಗುರುವಾರ ತಿಳಿಸಿದರು.
ಫೆಲೆಸ್ತೀನಿಗಳು ಯುದ್ಧಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಗಲು ಇಸ್ರೇಲ್ ಉತ್ತರ ಗಾಝಾ ಪಟ್ಟಿಯಲ್ಲಿ ಪ್ರತಿದಿನ ನಾಲ್ಕು ಗಂಟೆಗಳ ಕದನ ವಿರಾಮವನ್ನು ಆರಂಭಿಸಲಿದೆ ಎಂದು ಶ್ವೇತಭವನವು ಈ ಮೊದಲು ತಿಳಿಸಿತ್ತು.
ಇತ್ತೀಚಿನ ದಿನಗಳಲ್ಲಿ ಇಸ್ರೇಲಿ ಪಡೆಗಳು ಗಾಝಾ ಪಟ್ಟಣವನ್ನು ಸಂಪೂರ್ಣವಾಗಿ ಸುತ್ತುವರಿದಿವೆ. ಪ್ರತಿದಿನ ಮೂರು ಗಂಟೆಗಳ ಕಾಲ ಸಲಾಹ್ ಅಲ್-ದಿನ್ ಮುಖ್ಯರಸ್ತೆಯಲ್ಲಿ ನಾಗರಿಕರು ಸುರಕ್ಷಿತವಾಗಿ ತೆರಳಲು ಅವಕಾಶ ನೀಡುವುದಾಗಿ ಸೇನೆಯು ಹೇಳಿತ್ತು. ಆದರೆ ಬುಧವಾರದವರೆಗೆ ಕೆಲವೇ ಜನರು ಅಪಾಯವನ್ನು ಎದುರುಹಾಕಿಕೊಂಡು ಈ ಅವಕಾಶವನ್ನು ಬಳಸಿಕೊಂಡಿದ್ದರು.
ಆದರೆ ಕಳೆದ 48 ಗಂಟೆಗಳಲ್ಲಿ ಗಾಝಾ ನಗರವನ್ನು ತೊರೆಯುತ್ತಿರುವವರ ಸಂಖ್ಯೆಯು ಹೆಚ್ಚಿದೆ.
ನಗರವನ್ನು ತೊರೆಯದಂತೆ ಹಮಾಸ್ ನಿಂದ ಒತ್ತಡವಿದ್ದರೂ ಸಾವಿರಾರು ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ, ಬುಧವಾರ ಅತ್ಯಂತ ಅಗತ್ಯ ಸಾಮಗ್ರಿಗಳನ್ನು ಹೊತ್ತಿದ್ದ 64 ಟ್ರಕ್ ಗಳು ಗಾಝಾವನ್ನು ಪ್ರವೇಶಿಸಿವೆ ಎಂದು ಹೇಳಿದ ಹೆಟ್, ಭವಿಷ್ಯದಲ್ಲಿ ಟ್ರಕ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದರು.
ಹಮಾಸ್ ನಿರ್ಮೂಲನ ಮಿಲಿಟರಿ ಕಾರ್ಯಾಚರಣೆಗಳ ಉದ್ದೇಶವಾಗಿದೆ ಮತ್ತು ಅದು ಫಲ ನೀಡುತ್ತಿದೆ ಎಂದೂ ಅವರು ಹೇಳಿದರು.
ಇಸ್ರೇಲ್ ನ ವಾಯು ಮತ್ತು ಫಿರಂಗಿ ದಾಳಿಗಳಲ್ಲಿ ಗುರುವಾರದವರೆಗೆ 10,812 ಗಾಝಾ ನಿವಾಸಿಗಳು ಕೊಲ್ಲಲ್ಪಟ್ಟಿದ್ದು, ಅವರಲ್ಲಿ ಶೇ.40ರಷ್ಟು ಮಕ್ಕಳು ಸೇರಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.