ನಿಜ್ಜರ್ ಹತ್ಯೆಯಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪದ ಬಗ್ಗೆ ಸಾಬೀತಾಗಿಲ್ಲ; ಕೆನಡಾ ಆಯೋಗದ ವರದಿ

ಹರ್ದೀಪ್ ಸಿಂಗ್ ನಿಜ್ಜರ್ (Photo Credit: X/@BCSikhs)
ಒಟ್ಟಾವಾ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪದ ಬಗ್ಗೆ ಸಾಬೀತಾಗಿಲ್ಲ ಎಂದು ಕೆನಡಾದ ಆಯೋಗದ ವರದಿಯು ತಿಳಿಸಿದೆ ಎಂದು NDTV ವರದಿ ಮಾಡಿದೆ.
ಕೆನಡಾದ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ ಆಯೋಗದ ವರದಿಯು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ವಿದೇಶಿ ಹಸ್ತಕ್ಷೇಪ ಕಂಡು ಬಂದಿಲ್ಲ ಎಂದು ಹೇಳಿದೆ.
ಕೆನಡಾದ ಪ್ರಜೆ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ನನ್ನು 2023ರ ಜೂನ್ ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹತ್ಯೆ ಮಾಡಲಾಗಿತ್ತು. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಬಗ್ಗೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆ ಬಳಿಕ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು. ಭಾರತ ಸರಕಾರ ಕೆನಡಾದ ಎಲ್ಲಾ ಆರೋಪಗಳನ್ನು ಅಸಂಬದ್ಧ ಎಂದು ತಿರಸ್ಕರಿಸಿದೆ.
'ಸಂಯುಕ್ತ ರಾಷ್ಟ್ರದ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಸಾರ್ವಜನಿಕ ವಿಚಾರಣೆ' ಎಂಬ ಶೀರ್ಷಿಕೆಯ ವರದಿಯಲ್ಲಿ ಕಮಿಷನರ್ ಮೇರಿ-ಜೋಸಿ ಹೋಗ್, ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಶಿಕ್ಷಿಸಲು ತಪ್ಪು ಮಾಹಿತಿಯನ್ನು ಪ್ರತೀಕಾರದ ತಂತ್ರವಾಗಿ ಬಳಸಲಾಗುತ್ತದೆ. ಭಾರತ ನಿಜ್ಜರ್ ಹತ್ಯೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದೆ, ನಿಜ್ಜರ್ ಹತ್ಯೆಯಲ್ಲಿ ವಿದೇಶಿ ರಾಜ್ಯದ ಕೈವಾಡವಿರುವುದು ಸಾಬೀತಾಗಿಲ್ಲʼ ಎಂದು ವರದಿಯು ಉಲ್ಲೇಖಿಸಿದೆ.