ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ದೊರೆಯದಿದ್ದರೆ ಇಸ್ರೇಲ್ ಜೊತೆ ರಾಜತಾಂತ್ರಿಕ ಬಾಂಧವ್ಯ ಇಲ್ಲ: ಸೌದಿ
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ರಿಯಾದ್: ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ದೊರೆಯದೆ ಇದ್ದಲ್ಲಿ ಇಸ್ರೇಲ್ ಜೊತೆ ತಾನು ಯಾವುದೇ ರೀತಿಯ ರಾಜತಾಂತ್ರಿಕ ಬಾಂಧವ್ಯಗಳನ್ನು ಸ್ಥಾಪಿಸುವುದಿಲ್ಲವೆಂದು ಸೌದಿ ಅರೇಬಿಯವು ಬುಧವಾರ ಅಮೆರಿಕಕ್ಕೆ ಸ್ಪಷ್ಟಪಡಿಸಿದೆ.
1967ರಲ್ಲಿದ್ದಂತೆ ಪೂರ್ವ ಜೆರುಸಲೇಂ ಜೊತೆ ಗಡಿಯನ್ನು ಹೊಂದಿರುವ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಬೇಕು ಹಾಗೂ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಆಕ್ರಮಣ ನಿಲ್ಲಬೇಕು ಎಂದು ಸೌದಿ ವಿದೇಶಾಂಗ ಸಚಿವಾಲಯವು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಅವರು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಸೌದಿ ಆರೇಬಿಯ ಹಾಗೂ ಇಸ್ರೇಲ್ ಉಭಯ ದೇಶಗಳ ಬಾಂಧವ್ಯಗಳನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳನ್ನು ಮಂದುವರಿಸಲು ಆಸಕ್ತವಾಗಿವೆ ಎಂಬ ಬಗ್ಗೆ ಸಕಾರಾತ್ಮಕ ಮಾಹಿತಿ ಲಭ್ಯವಾಗಿದೆಯೆಂದು ಹೇಳಿಕೆ ನೀಡಿದ ಬೆನ್ನಲ್ಲೇ ಸೌದಿ ಅರೇಬಿಯ ಈ ಸ್ಪಷ್ಟನೆ ನೀಡಿದೆ.
ಸೌದಿ ಆರೇಬಿಯವು 2020ರಲ್ಲಿ ತನ್ನ ನೆರೆಹೊರೆಯ ದೇಶಗಳಾದ ಯುಎಇ ಹಾಗೂ ಬಹರೈನ್ ಗೆ ಇಸ್ರೇಲ್ ಜೊತೆ ಬಾಂಧವ್ಯವನ್ನು ಸ್ಥಾಪಿಸಲು ಒಪ್ಪಿಗೆ ನೀಡಿತ್ತು. ಅಲ್ಲದೆ ತಾನು ಕೂಡಾ ಇಸ್ರೇಲ್ ಜೊತೆ ರಾಜತಾಂತ್ರಿಕ ಬಾಂಧವ್ಯವನ್ನು ಸ್ಥಾಪಿಸಲು ಮಾತುಕತೆಯನ್ನು ಆರಂಭಿಸಲು ಚಿಂತಿಸಿತ್ತು.
ಆದರೆ ಕಳೆದ ವರ್ಷದ ಆಕ್ಟೋಬರ್ ನಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವೆ ಭೀಕರ ಸಂಘರ್ಷ ಭುಗಿಲೆದ್ದ ಬಳಿ ಇಸ್ರೇಲ್-ಸೌದಿ ಬಾಂಧವ್ಯವನ್ನು ಸಹಜಗೊಳಿಸುವ ಅಮೆರಿಕ ಬೆಂಬಲಿತ ಯೋಜನೆಯು ಸ್ಥಗಿತಗೊಂಡಿತ್ತು.
ಸಂಘರ್ಷ ಪೀಡಿತ ಗಾಝಾದ ಮೂರನೇ ಎರಡರಷ್ಟು ಭಾಗದ ಪ್ರದೇಶದಿಂದ ತೆರವುಗೊಳ್ಳುವಂತೆ ಇಸ್ರೇಲ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಾವಿರಾರು ಫೆಲೆಸ್ತೀನಿಯರು ರಫಾದಲ್ಲಿ ಬೀಡುಬಿಟ್ಟಿದ್ದಾರೆ.
ಇಸ್ರೇಲ್ ಗೆ ತೆರಳಿದ ಬ್ಲಿಂಕೆನ್:
ಖತರ್ ಭೇಟಿಯ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇಸ್ರೇಲ್ ಗೆ ಆಗಮಿಸಿದ್ದು, ರಾಜಧಾನಿ ಟೆಲ್ಅವೀವ್ ನಲ್ಲಿ ಇಸ್ರೇಲಿ ನಾಯಕರ ಜೊತೆ ಮಾತುಕತೆ ನಡೆಸಿದರು. ಗಾಝಾದಲ್ಲಿ ಕದನವಿರಾಮ ಹಾಗೂ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಕುರಿತಾಗಿ ಖತರ್ ನಲ್ಲಿ ತಾನು ನಡೆಸಿದ ಮಾತುಕತೆಗಳನ್ನು ಅವರು ವಿವರಿಸಿದರು.