ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಮೋದಿ, ಜೈಶಂಕರ್, ದೋವಲ್ ನಂಟಿರುವ ಬಗ್ಗೆ ಪುರಾವೆಯಿಲ್ಲ: ಕೆನಡಾ ಸ್ಪಷ್ಟನೆ
PC : PTI/AP
ಒಟ್ಟಾವ : 2023ರ ಜೂನ್ನಲ್ಲಿ ನಡೆದ ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ನಂಟು ಕಲ್ಪಿಸುವ ಪುರಾವೆಯು ಇರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲವೆಂದು ಕೆನಡಾ ಸರಕಾರವು ಶುಕ್ರವಾರ ಸ್ಪಷ್ಟಪಡಿಸಿದೆ.
ಎಸ್.ಜೈಶಂಕರ್, ದೋವಲ್ ಹಾಗೂ ನರೇಂದ್ರ ಮೋದಿಯವರ ಬೆಂಬಲದೊಂದಿಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರು ನಿಜ್ಜಾರ್ ಹತ್ಯೆಗೆ ಹಸಿರು ನಿಶಾನೆ ನೀಡಿದ್ದರೆಂದು ಒಟ್ಟಾವದಲ್ಲಿರುವ ರಾಷ್ಟ್ರೀಯ ಭದ್ರತಾ ಅಧಿಕಾರಿಯವರ ವರದಿಯನ್ನು ಆಧರಿಸಿ ಕೆನಡಾದ ಸುದ್ದಿಸಂಸ್ಥೆಯೊಂದು ವರದಿ ಮಾಡಿದ ಮರುದಿನವೇ ಕೆನಡಿಯನ್ ಸರಕಾರವು ಈ ಸ್ಪಷ್ಟೀಕರಣ ನೀಡಿದೆ.
ಕೆನಡಾದ ಸುದ್ದಿಸಂಸ್ಥೆಯು ಪ್ರಕಟಿಸಿದ ಈ ವರದಿಯು ಊಹಾತ್ಮಕ ಹಾಗೂ ನಿಖರವಾದುದಲ್ಲವೆಂದು ಕೆನಡಾ ಪ್ರಧಾನಿಯವರ ರಾಷ್ಟ್ರೀಯ ಭದ್ರತೆ ಹಾಗೂ ಬೇಹುಗಾರಿಕಾ ಸಲಹೆಗಾರ್ತಿ ನತಾಲಿ ಜಿ. ಡ್ರೂಯಿನ್ ತಿಳಿಸಿದ್ದಾರೆ.
ಸಾರ್ವಜನಿಕ ಸುರಕ್ಷತೆಗೆ ಗಂಭೀರವಾದ ಬೆದರಿಕೆಯಿರುವ ಹಿನ್ನೆಲೆಯಲ್ಲಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್( ಆರ್ಸಿಎಂಪಿ ) ಹಾಗೂ ಇತರ ಅಧಿಕಾರಿಗಳು ಆಕ್ಟೋಬರ್ 14ರಂದು ನೀಡಿದ ಹೇಳಿಕೆಯೊಂದರಲ್ಲಿ ಕೆನಡಾದಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ಭಾರತ ಸರಕಾರದ ಏಜೆಂಟರುಗಳು ನಡೆಸಿದ್ದಾರೆಂದು ಆಪಾದಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಜೈಶಂಕರ್ ಅಥವಾ ರಾಷ್ಟ್ರೀಯ ಭದ್ರತಾ ಅಧಿಕಾರಿ ಅಜಿತ್ ದೋವಲ್ ಅವರಿಗೆ ಕೆನಡಾದೊಳಗೆ ನಡೆದ ಕ್ರಿಮಿನಲ್ ಚಟುವಟಿಕೆಗಳೊಂದಿಗೆ ಸಂಬಂಧವಿದೆ ಹಾಗೂ ಆ ಬಗ್ಗೆ ಪುರಾವೆಯಿದೆಯೆಂದು ಕೆನಡಾ ಸರಕಾರ ಎಂದೂ ಹೇಳಿಲ್ಲವೆಂದು ನತಾಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ಧೋವಲ್ ಅವರ ವಿರುದ್ಧ ಕೆನಡಾದ ಸುದ್ದಿಸಂಸ್ಥೆಯು ಪ್ರಕಟಿಸಿದ ವರದಿಗೆ ಭಾರತವು ಗುರುವಾರ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.
ಈ ರೀತಿಯ ಕಳಂಕಕಾರಿ ಅಪಪ್ರಚಾರವು ಈಗಾಗಲೇ ಹಳಸಿರುವ ಉಭಯದೇಶಗಳ ಬಾಂಧವ್ಯವನ್ನು ಇನ್ನಷ್ಟು ಹದೆಗೆಡಿಸಲಿದೆ ಎಂದು ಭಾರತ ಸರಕಾರದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದರು.