ಬಾಂಗ್ಲಾ ಪ್ರವಾಸಿಗರಿಗೆ ಊಟ, ವಸತಿ ಇಲ್ಲ: ತ್ರಿಪುರಾ ಹೋಟೆಲ್ ಸಂಘ
PC: x.com/ndtv
ಗುವಾಹತಿ: ಬಾಂಗ್ಲಾದೇಶಿ ಪ್ರವಾಸಿಗರಿಗೆ ತ್ರಿಪುರಾದಲ್ಲಿ ಹೋಟೆಲ್ ಕೊಠಡಿಗಳನ್ನು ನೀಡದಿರಲು ಮತ್ತು ಊಟೋಪಚಾರ ವ್ಯವಸ್ಥೆ ಮಾಡದಿರಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ರಾಜ್ಯದ ಪ್ರವಾಸೋದ್ಯಮ ವಲಯದ ಪ್ರಮುಖ ಸಂಘ ಈ ನಿರ್ಧಾರ ಪ್ರಕಟಿಸಿದೆ.
ಬಾಂಗ್ಲಾದೇಶಿ ಪ್ರವಾಸಿಗರಿಗೆ ಹೋಟೆಲ್ ಗಳಲ್ಲಿ ಕೊಠಡಿ ನೀಡುವುದಿಲ್ಲ ಹಾಗೂ ರೆಸ್ಟೋರಂಟ್ ಗಳಲ್ಲಿ ಅವರಿಗೆ ಊಟೋಪಚಾರ ನೀಡಲಾಗುವುದಿಲ್ಲ ಎಂದು ಅಖಿಲ ತ್ರಿಪುರಾ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಪ್ರಕಟಣೆ ಹೇಳಿದೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್ ಧರ್ಮಗುರು ಚಿನ್ಮಯ್ ಕೃಷ್ಣದಾಸ್ ಬಂಧನ ಮತ್ತು ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿರುವ ಬಾಂಗ್ಲಾದೇಶಿ ಮಿಷಿನ್ ಕಚೇರಿ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿದ ಮರುದಿನವೇ ಹೋಟೆಲ್ ಮಾಲೀಕರ ಸಂಘ ಈ ನಿರ್ಧಾರ ಪ್ರಕಟಿಸಿದೆ.
50ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಅಗರ್ತಲಾದಲ್ಲಿರುವ ಬಾಂಗ್ಲಾದೇಶಿ ಮಿಷಿನ್ ಕಚೇರಿಯನ್ನು ಪ್ರವೇಶಿಸಿದ್ದು, ಉದ್ವಿಗ್ನ ಸ್ಥಿತಿಗೆ ಕಾರಣವಾಯಿತು. ಸಿಬ್ಬಂದಿ ಮತ್ತು ಅಧಿಕಾರಿಗಳು ಭಯಭೀತರಾದರು. ಈ ಘಟನೆ ತೀರಾ ವಿಷಾದನೀಯ ಎಂದು ಭಾರತ ಪ್ರತಿಕ್ರಿಯಿಸಿದೆ. ಯಾವುದೇ ಪರಿಸ್ಥಿತಿಯಲ್ಲಿ ರಾಜತಾಂತ್ರಿಕ ಆಸ್ತಿಗಳನ್ನು ಗುರಿ ಮಾಡದಂತೆ ಮನವಿ ಮಾಡಿದೆ.