ದೀರ್ಘಾವಧಿಗೆ ಗಾಝಾವನ್ನು ನಿಯಂತ್ರಿಸುವ ಉದ್ದೇಶವಿಲ್ಲ: ಇಸ್ರೇಲ್
Photo- PTI
ಟೆಲ್ಅವೀವ್: ಗಾಝಾವನ್ನು ಮತ್ತೆ ಸ್ವಾಧೀನಕ್ಕೆ ಪಡೆಯುವ ಅಥವಾ ಅದನ್ನು ದೀರ್ಘಾವಧಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಇಸ್ರೇಲ್ ಗುರುವಾರ ಹೇಳಿದೆ.
ನಮ್ಮ ಪ್ರಸ್ತುತ ಕಾರ್ಯಾಚರಣೆಗಳು ಪರಿಣಾಮಕಾರಿ ಮತ್ತು ಯಶಸ್ವಿಯಾಗಿದೆ ಎಂದು ನಾವು ನಿರ್ಣಯಿಸಿದ್ದೇವೆ ಮತ್ತು ಶತ್ರುವನ್ನು ಹಿಂದಕ್ಕೆ ತಳ್ಳುವುದನ್ನು ಮುಂದುವರಿಸಲಿದ್ದೇವೆ. ಇದು ಅನಿಯಮಿತ ಅಥವಾ ಶಾಶ್ವತ ಕಾರ್ಯಾಚರಣೆಯಲ್ಲ. ನಮಗೆ ಬೆದರಿಕೆ ಒಡ್ಡುವ ಹಮಾಸ್ನ ಸಾಮಥ್ರ್ಯವನ್ನು ನಾಶಪಡಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ' ಎಂದು ಇಸ್ರೇಲ್ ಸರಕಾರದ ಉನ್ನತ ಮೂಲಗಳು ಹೇಳಿವೆ.
ಗಾಝಾ ಪಟ್ಟಿಯನ್ನು ಹಮಾಸ್ ನಿಯಂತ್ರಣದಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಮಾಡಿರುವ ಇಸ್ರೇಲ್, ಗಾಝಾ ಪಟ್ಟಿಗೆ ಸಂಬಂಧಿಸಿದಂತೆ ತನ್ನ ದೀರ್ಘಾವಧಿಯ ಯೋಜನೆಯನ್ನು ಬಹಿರಂಗಗೊಳಿಸಿಲ್ಲ.
ಗಾಝಾದ ಭದ್ರತೆಯ ಹೊಣೆಯನ್ನು ಇಸ್ರೇಲ್ ಅನಿರ್ದಿಷ್ಟಾವಧಿಯವರೆಗೆ ಹೊಂದಲು ಬಯಸುತ್ತದೆ ಎಂದು ಈ ವಾರದ ಆರಂಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕ `ಗಾಝಾವನ್ನು ಇಸ್ರೇಲ್ ಮತ್ತೆ ಸ್ವಾಧೀನಕ್ಕೆ ಪಡೆಯಬಾರದು' ಎಂದು ಹೇಳಿತ್ತು.