ಇಸ್ರೇಲ್ನ ಯಾವುದೇ ದೂತಾವಾಸ ಇನ್ನುಮುಂದೆ ಸುರಕ್ಷಿತವಲ್ಲ: ಇರಾನ್ ಎಚ್ಚರಿಕೆ
Photo : NDTV
ಟೆಹ್ರಾನ್: ಇಸ್ರೇಲ್ನ ಯಾವುದೇ ದೂತಾವಾಸಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ನ ಉನ್ನತ ರಕ್ಷಣಾ ಸಲಹೆಗಾರ ಜ| ರಹೀಮ್ ಸಫಾವಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರ ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಇರಾನ್ ರೆವೊಲ್ಯುಷನರಿ ಗಾಡ್ರ್ಸ್ನ ಉನ್ನತ ಕಮಾಂಡರ್ಗಳ ಸಹಿತ 12 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ದೂಷಿಸಿರುವ ಇರಾನ್, ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ನಮಗೆ ಯಾರೆಲ್ಲಾ ಹಾನಿ ಮಾಡುತ್ತಾರೋ ಅಥವಾ ಹಾನಿ ಮಾಡಲು ಪ್ರಯತ್ನಿಸುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ. ಈ ಸಿದ್ಧಾಂತವನ್ನು ನಾವು ಸದಾಕಾಲ ಪಾಲಿಸುತ್ತಿದ್ದೇವೆ' ಎಂದು ರಹೀಮ್ ಸಫಾವಿ ಹೇಳಿದ್ದಾರೆ. ರವಿವಾರ ಟೆಹ್ರಾನ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅವರು ಮಾತನಾಡಿದರು. ಇರಾನ್ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಅವರ ಮಿಲಿಟರಿ ಸಲಹೆಗಾರರಾಗಿರುವ ಸಫಾವಿ ಅವರ ಹೇಳಿಕೆಯು `ಇರಾನ್ನ ದೂತಾವಾಸಕ್ಕೆ ನಡೆದ ದಾಳಿಗೆ ಅದೇ ರೀತಿಯಲ್ಲಿ ಉತ್ತರಿಸುವ' ಸೂಚನೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಗಾಝಾದ ಖಾನ್ಯೂನಿಸ್ ನಗರದಿಂದ ತನ್ನ 98ನೇ ಪ್ಯಾರಾಟ್ರೂಪರ್ ಘಟಕವನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಇಸ್ರೇಲ್ ರವಿವಾರ ಘೋಷಿಸಿತ್ತು. ಇರಾನ್ನ ಸಂಭಾವ್ಯ ಪ್ರತಿದಾಳಿಗೆ ನಡೆಸುತ್ತಿರುವ ಸನ್ನದ್ಧತೆಗೆ ಪೂರಕವಾಗಿ ಇಸ್ರೇಲ್ ಈ ಕ್ರಮ ಕೈಗೊಂಡಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.