ಉತ್ತರ ಕೊರಿಯದಿಂದ ಪ್ರಬಲ ಕ್ರೂಸ್ ಕ್ಷಿಪಣಿ ಪರೀಕ್ಷಾ ಉಡಾವಣೆ

ಸಾಂದರ್ಭಿಕ ಚಿತ್ರ | PC : NDTV
ವೊಂಗ್ಯಾಂಗ್: ತನ್ನ ‘ಅಣ್ವಸ್ತ್ರ ತಡೆ’ ಕಾರ್ಯತಂತ್ರದ ಭಾಗವಾಗಿ ಪಶ್ಚಿಮ ಸಮುದ್ರದಲ್ಲಿ ಆಯಕಟ್ಟಿನ ಕ್ರೂಸ್ ಕ್ಷಿಪಣಿ ಉಡಾವಣಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯ ಶುಕ್ರವಾರ ತಿಳಿಸಿದೆ.
ಈ ಕ್ಷಿಪಣಿಯ ಪರೀಕ್ಷಾ ಉಡಾವಣೆಯ ಮೂಲಕ ಉತ್ತರ ಕೊರಿಯವು ತನ್ನ ಶತ್ರುಗಳಿಗೆ ಬಲವಾದ ಸಂದೇಶವೊಂದನ್ನು ನೀಡಿದೆಯೆಂದು ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಸುಮಾರು 130 ನಿಮಿಷಗಳ ಕಾಲ ಹಾರಾಟ ನಡೆಸಿ ಕ್ಷಿಪಣಿಯು 1587 ಕಿ.ಮೀ. ವರೆಗೆ ಚಲಿಸಿ, ತನ್ನ ಗುರಿಗೆ ಅಪ್ಪಳಿಸಿದೆಯೆಂದು ಕೆಸಿಎನ್ಎ ಸುದ್ದಿಸಂಸ್ಥೆ ತಿಳಿಸಿದೆ.
ಉತ್ತರ ಕೊರಿಯ ನಾಯಕ ಕಿಮ್ ಜೊಂಗ್ ಉನ್ ಅವರು ಉನ್ನತ ಸೇನಾಧಿಕಾರಿಗಳಾದ ಜ.ಕಿಮ್ ಜೊಂಗ್ ಸುಕ್ ಹಾಗೂ ಜಾಂಗ್ ಚಾಂಗ್ ಹಾ ಜೊತೆ ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ವೀಕ್ಷಿಸಿದರು. ಈ ಕ್ಷಿಪಣಿಯು ಅಣ್ವಸ್ತ್ರ ದಾಳಿ ತಡೆ ಹಾಗೂ ರಕ್ಷಣೆಯ ಅಂತಿಮ ರೂಪವಾಗಿದ್ದು, ಬಲಿಷ್ಠ ದಾಳಿ ಸಾಮರ್ಥ್ಯವನ್ನು ಹೊಂದಿದೆ ಎಂದು ಕಿಮ್ ಜೊಂಗ್ ಉನ್ ಹೇಳಿದ್ದಾರೆ. ವಿಶ್ವಸನೀಯವಾದ ಅಣ್ವಸ್ತ್ರ ಕವಚದ ಮೂಲಕ ದೇಶವನ್ನು ಶಾಶ್ವತವಾಗಿ ರಕ್ಷಿಸುವ ಉತ್ತರ ಕೊರಿಯದ ಹೊಣೆಗಾರಿಕೆಯನ್ನು ಅವರು ಒತ್ತಿ ಹೇಳಿದರು.