ಉತ್ತರ ಕೊರಿಯಾ ಸ್ಥಾಪನಾ ದಿನಾಚರಣೆ; ರಶ್ಯ, ಚೀನಾದ ನಿಯೋಗ ಉಪಸ್ಥಿತಿ
Photo- PTI
ಪ್ಯೋಂಗ್ಯಾಂಗ್: ಉತ್ತರ ಕೊರಿಯಾವು ಚೀನಾ ಮತ್ತು ರಶ್ಯ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುವ ಕ್ರಮಗಳನ್ನು ಮುಂದುವರಿಸಿದ್ದು ಉತ್ತರ ಕೊರಿಯಾದ ಸ್ಥಾಪನಾ ದಿನದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪರೇಡ್ನಲ್ಲಿ ಅಧ್ಯಕ್ಷ ಕಿಮ್ ಜಾಂಗ್ಉನ್ ಹಾಗೂ ಚೀನಾ, ರಶ್ಯದ ಉನ್ನತ ಮಟ್ಟದ ನಿಯೋಗ ಪಾಲ್ಗೊಂಡಿದೆ ಎಂದು ಸರಕಾರಿ ಸ್ವಾಮ್ಯದ ಕೆಸಿಎನ್ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.
ಶುಕ್ರವಾರ ನಡೆದ ಪರೇಡ್ನಲ್ಲಿ ರಕ್ಷಣಾ ಪಡೆಗಳ ಸಿಬಂದಿಯ ಬದಲು ಅರೆಸೇನಾ ಪಡೆಯ ಸಿಬಂದಿ ಪಾಲ್ಗೊಂಡಿದ್ದರು ಮತ್ತು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಸೇರಿದಂತೆ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗಿಲ್ಲ.ಚೀನಾದ ನಿಯೋಗದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮಂಡಳಿಯ ಉಪ ಪ್ರೀಮಿಯರ್ ಲಿಯು ಗುವೊಝೊಂಗ್ ವಹಿಸಿದ್ದರು. ಕಳೆದ ಒಂದೂವರೆ ತಿಂಗಳಲ್ಲಿ ಚೀನಾದ ಉನ್ನತ ಮಟ್ಟದ ನಿಯೋಗ ಉತ್ತರ ಕೊರಿಯಾಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ.
ಇದೇ ಸಂದರ್ಭ ಉತ್ತರ ಕೊರಿಯಾ ಅಧ್ಯಕ್ಷರಿಗೆ ಕರೆ ಮಾಡಿದ ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಎಂದು ವರದಿ ಹೇಳಿದೆ. ರಶ್ಯದ ಉನ್ನತ ಮಟ್ಟದ ನಿಯೋಗವೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತರ ಕೊರಿಯಾ ಅಧ್ಯಕ್ಷರಿಗೆ ಕಳುಹಿಸಿದ ಸಂದೇಶವನ್ನು ಹಸ್ತಾಂತರಿಸಿತು.