ದೂರದ ಅಮೆರಿಕಾ ನೆಲೆಗಳನ್ನು ತಲುಪಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಉತ್ತರ ಕೊರಿಯಾ
Photo: PTI
ಪ್ಯಾಂಗ್ಯಾಂಗ್: ರವಿವಾರ ಉತ್ತರ ಕೊರಿಯಾವು ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರಕ್ಕೆ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಸೇನಾ ಪಡೆಯು ಹೇಳಿದೆ. ಈ ಕ್ಷಿಪಣಿಯು ದೂರದ ಅಮೆರಿಕಾ ನೆಲೆಗಳ ಗುರಿಗಳನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಈ ವರ್ಷದಲ್ಲಿ ಉತ್ತರ ಕೊರಿಯಾವು ಇದೇ ಪ್ರಥಮ ಬಾರಿಗೆ ಕ್ಷಿಪಣಿ ಉಡಾವಣೆ ಮಾಡಿದೆ ಎಂದು Associated Press ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ದಕ್ಷಿಣ ಕೊರಿಯಾ ಲೋಕಸಭಾ ಚುನಾವಣೆ ಹಾಗೂ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಉತ್ತರ ಕೊರಿಯಾವು ಈ ಪ್ರಚೋದನಾಕಾರಿ ಕ್ಷಿಪಣಿ ಪರೀಕ್ಷೆಗೆ ಮತ್ತಷ್ಟು ವೇಗ ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.
ರವಿವಾರ ಮಧ್ಯಾಹ್ನ ಉತ್ತರ ಕೊರಿಯಾದ ರಾಜಧಾನಿ ಪ್ರಾಂತ್ಯದಿಂದ ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯಾಗಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ದಕ್ಷಿಣ ಕೊರಿಯಾ ಸೇನೆಯ ಜಂಟಿ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರಿಯನ್ ಪೆನಿನ್ಸುಲಾ ಹಾಗೂ ಜಪಾನ್ ನಡುವಿನ ಸಮುದ್ರಕ್ಕೆ ಬೀಳುವುದಕ್ಕೂ ಮುನ್ನ ಈ ಕ್ಷಿಪಣಿಯು ಸುಮಾರು 1,000 ಕಿಮೀ (620 ಮೈಲುಗಳು) ಕ್ರಮಿಸಿತು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಉತ್ತರ ಕೊರಿಯಾ ರಾಜಧಾನಿ ಪ್ಯಾಂಗ್ಯಾಂಗ್ ನಿಂದ ಸುಮಾರು 3,400 ಕಿಮೀ (2,110 ಮೈಲುಗಳು) ದೂರವಿರುವ ಅಮೆರಿಕಾದ ಪೆಸಿಫಿಕ್ ಪ್ರಾಂತ್ಯವಾದ ಗ್ವಾಮ್ ನಲ್ಲಿನ ಅಮೆರಿಕಾ ಸೇನಾ ನೆಲೆಗಳಿಗೆ ಅಪ್ಪಳಿಸುವಂತೆ ಈ ಕ್ಷಿಪಣಿಯನ್ನು ಪ್ರಮುಖವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಾಗಿದೆ.