ಉತ್ತರ ಕೊರಿಯಾ ನಮ್ಮ ನಿಕಟ ಪಾಲುದಾರ : ರಶ್ಯ ಶ್ಲಾಘನೆ
ಕಿಮ್ ಜಾಂಗ್ ಉನ್, ವ್ಲಾದಿಮರ್ ಪುಟಿನ್ | Photo: NDTV
ಮಾಸ್ಕೊ: ಉತ್ತರ ಕೊರಿಯಾವು ನಮ್ಮ ನಿಕಟ ನೆರೆದೇಶ ಮತ್ತು ಆತ್ಮೀಯ ಪಾಲುದಾರನಾಗಿದೆ. ಆ ದೇಶದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಂಬಂಧವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ರಶ್ಯ ಸೋಮವಾರ ಹೇಳಿದೆ.
ಸೆಪ್ಟಂಬರ್ ನಲ್ಲಿ ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ರಶ್ಯದ ವೊಸ್ತೊಚ್ನಿ ಉಪಗ್ರಹ ಉಡಾವಣಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭ ಅವರನ್ನು ಸ್ವಾಗತಿಸಿದ್ದ ರಶ್ಯ ಅಧ್ಯಕ್ಷ ವ್ಲಾದಿಮರ್ ಪುಟಿನ್, ಉತ್ತರ ಕೊರಿಯಾ ಉಪಗ್ರಹ ನಿರ್ಮಿಸಲು ರಶ್ಯ ಎಲ್ಲಾ ನೆರವು ಒದಗಿಸಲಿದೆ ಎಂದು ಭರವಸೆ ನೀಡಿದ್ದರು. ಇದೀಗ ಉತ್ತರ ಕೊರಿಯಾ ವಿದೇಶಾಂಗ ಸಚಿವ ಚೊಯ್ ಸೊನ್ ಹುಯಿ ನೇತೃತ್ವದ ನಿಯೋಗ ರಶ್ಯಕ್ಕೆ ಭೇಟಿ ನೀಡಿದೆ.
ಈ ಭೇಟಿಯು ಎರಡೂ ದೇಶಗಳ ನಡುವಿನ ಒಪ್ಪಂದದ ಮುಂದುವರಿದ ಭಾಗವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಉಭಯ ದೇಶಗಳ ನಡುವೆ ಆಳವಾದ ಮತ್ತು ಸಫಲ ಮಾತುಕತೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಉಕ್ರೇನ್ ಜತೆಗಿನ ಯುದ್ಧದ ಬಳಿಕ ರಶ್ಯವು ಅಮೆರಿಕ ವಿರೋಧಿ ದೇಶಗಳಾದ ಇರಾನ್, ಉತ್ತರ ಕೊರಿಯಾ ಮತ್ತಿತರ ದೇಶಗಳ ಜತೆಗಿನ ಬಾಂಧವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಂಡಿದೆ.