ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ
ಸಾಂದರ್ಭಿಕ ಚಿತ್ರ | Photo:NDTV
ಸಿಯೋಲ್ : ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಉತ್ತರ ಕೊರಿಯಾ ಕನಿಷ್ಠ 7 ಸಮೀಪ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ನ ಸಶಸ್ತ್ರ ಪಡೆಗಳು ಇತ್ತೀಚೆಗೆ ನಡೆಸಿದ್ದ ಸೇನಾ ಕವಾಯತನ್ನು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಖಂಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಉತ್ತರ ಹ್ವಾಂಘೆ ಪ್ರಾಂತದ ರಹಸ್ಯ ಸ್ಥಳದಿಂದ ಮಂಗಳವಾರ ಬೆಳಿಗ್ಗೆ 7:30ಕ್ಕೆ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ.
100 ಕಿ.ಮೀ ಎತ್ತರದಲ್ಲಿ ಹಾರಿಹೋದ 7 ಕ್ಷಿಪಣಿಗಳು 400 ಕಿ.ಮೀ ದೂರ ಕ್ರಮಿಸಿ ಜಪಾನ್ ನ ವಿಶೇಷ ಆರ್ಥಿಕ ವಲಯದ ಹೊರಗೆ ಸಾಗರಕ್ಕೆ ಬಿದ್ದಿದೆ ಎಂದು ಜಪಾನ್ನ ರಕ್ಷಣಾ ಇಲಾಖೆ ಹೇಳಿದೆ. ಕ್ಷಿಪಣಿ ಪ್ರಯೋಗಿಸಿದ ಬಳಿಕ ದಕ್ಷಿಣ ಕೊರಿಯಾ, ಜಪಾನ್ ಹಾಗೂ ಈ ಪ್ರದೇಶದ ಇತರ ಮಿತ್ರರ ಜತೆ ನಿಕಟ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕದ ಮಿಲಿಟರಿ ಹೇಳಿದೆ.
ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಮಿಲಿಟರಿ ಕವಾಯತಿಗೆ ಆಕ್ಷೇಪ ಮತ್ತು ಪ್ರತಿಭಟನೆ ಸೂಚಿಸುವುದು ನೇರ ಉದ್ದೇಶವಾಗಿದ್ದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ ತಮ್ಮ ಉಪಸ್ಥಿತಿಯನ್ನು ಜಾಹೀರುಪಡಿಸುವುದು ಮತ್ತು ರಶ್ಯಕ್ಕೆ ಉತ್ತರ ಕೊರಿಯಾದ ಯೋಧರನ್ನು ರವಾನಿಸಿರುವ ವಿಷಯದಿಂದ ಅಂತರಾಷ್ಟ್ರೀಯ ಗಮನವನ್ನು ಬೇರೆಡೆ ಸೆಳೆಯುವುದು ಕ್ಷಿಪಣಿ ಪ್ರಯೋಗದ ಪರೋಕ್ಷ ಉದ್ದೇಶವಾಗಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.