ಉತ್ತರ ಕೊರಿಯಾ | ಕೆ-ಪಾಪ್ ಸಂಗೀತ ಆಲಿಸಿದ ಯುವಕನಿಗೆ ಮರಣದಂಡನೆ
ಕಿಮ್ ಜಾಂಗ್ ಉನ್ - Photo : PTI
ಪೋಂಗ್ಯಾಂಗ್ : ದಕ್ಷಿಣ ಕೊರಿಯಾದ ಜನಪ್ರಿಯ ಗಾಯನತಂಡ ಕೆ-ಪಾಪ್ನ ಸಂಗೀತ ಆಲಿಸಿದ 22 ವರ್ಷದ ಯುವಕನಿಗೆ ಉತ್ತರ ಕೊರಿಯಾ ಸರಕಾರ ಸಾರ್ವಜನಿಕ ಮರಣದಂಡನೆ ಶಿಕ್ಷೆ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೆ-ಪಾಪ್ ಮ್ಯೂಸಿಕ್ ಮತ್ತು ಸಿನೆಮಾಗಳನ್ನು ಆಲಿಸಿದ ಹಾಗೂ ಹಂಚಿಕೊಂಡಿರುವುದಕ್ಕೆ 22 ವರ್ಷದ ಯುವಕನಿಗೆ ಉತ್ತರ ಕೊರಿಯಾದಲ್ಲಿ ಸಾರ್ವಜನಿಕ ಮರಣದಂಡನೆ ಶಿಕ್ಷೆ ಜಾರಿಯಾಗಿದೆ. ದಕ್ಷಿಣ ಹುವಾಂಘೆ ಪ್ರಾಂತದ ಯುವಕ ದಕ್ಷಿಣ ಕೊರಿಯಾದ 70 ಮ್ಯೂಸಿಕ್ ಆಲ್ಬಂಗಳು, ಮೂರು ಸಿನೆಮಾಗಳನ್ನು ವೀಕ್ಷಿಸಿ ಹಂಚಿಕೊಳ್ಳುವ ಮೂಲಕ `ಪ್ರತಿಕ್ರಿಯಾತ್ಮಕ ಸಿದ್ಧಾಂತ ಮತ್ತು ಸಂಸ್ಕೃತಿ' ನಿಷೇಧಿಸುವ 2020ರ ಕಾಯ್ದೆಯನ್ನು ಉಲ್ಲಂಘಿಸಿದ್ದಾನೆ ಎಂದು ಉತ್ತರ ಕೊರಿಯಾ ಸರಕಾರದ ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ದಕ್ಷಿಣ ಕೊರಿಯಾದ ಪಾಪ್ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಯ ಕೆಟ್ಟ ಪ್ರಭಾವಕ್ಕೆ ಒಳಗಾಗಿರುವುದರಿಂದ ಅದನ್ನು ನಿಷೇಧಿಸಲಾಗಿದೆ ಎಂದು ಉತ್ತರ ಕೊರಿಯಾ ಸರಕಾರ ಪ್ರತಿಪಾದಿಸಿದೆ.