ಉತ್ತರ ಕೊರಿಯಾದ ಪತ್ತೇದಾರಿ ಉಪಗ್ರಹ ಹೊತ್ತೊಯ್ದ ರಾಕೆಟ್ ಸ್ಫೋಟ: ವರದಿ
ಪೋಂಗ್ಯಾಂಗ್, ಮೇ 28: ದೇಶದ ಎರಡನೇ ಪತ್ತೇದಾರಿ ಉಪಗ್ರಹವನ್ನು ಅಂತರಿಕ್ಷದಲ್ಲಿ ನಿಯೋಜಿಸುವ ಉದ್ದೇಶದಿಂದ ಉತ್ತರ ಕೊರಿಯಾ ಉಡಾವಣೆಗೊಳಿಸಿದ ರಾಕೆಟ್ ಭೂಮಿಯಿಂದ ಮೇಲೇರಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಹಳದಿ ಸಮುದ್ರಕ್ಕೆ ಪತನಗೊಂಡಿದ್ದು ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳ ಮೇಲೆ ಅಂತರಿಕ್ಷದಿಂದ ನಿಗಾ ಇರಿಸುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಮಹಾತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದ ನಿಯೋಗಗಳ ನಡುವೆ ಸಿಯೋಲ್‍ನಲ್ಲಿ ಉನ್ನತ ಮಟ್ಟದ ಸಭೆ ನಡೆದ ಕೆಲವೇ ಗಂಟೆಗಳ ಬಳಿಕ ಉತ್ತರ ಕೊರಿಯಾ ಈ ವಿಫಲ ಉಡಾವಣೆ ನಡೆಸಿರುವುದು ಗಮನಾರ್ಹವಾಗಿದೆ. ವಾಯವ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸ ರಾಕೆಟ್ ಬಳಸಿ ಉಪಗ್ರಹ ಉಡಾವಣೆ ನಡೆಸಿದ್ದು ಪ್ರಥಮ ಹಂತದಲ್ಲೇ ರಾಕೆಟ್ ಸ್ಫೋಟಗೊಂಡಿದೆ. ರಾಕೆಟ್‍ನಲ್ಲಿ ಹೊಸ ರೀತಿಯ ದ್ರವ ಆಮ್ಲಜನಕ ಮತ್ತು ಪೆಟ್ರೋಲಿಯಂ ಇಂಜಿನ್ ಬಳಕೆಯನ್ನು ಪರೀಕ್ಷಿಸಿರುವುದು ವೈಫಲ್ಯಕ್ಕೆ ಕಾರಣವಾಗಿದೆ. ಇತರ ಕಾರಣಗಳ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ ಎಂದು ಉತ್ತರ ಕೊರಿಯಾ ಸರಕಾರ ಹೇಳಿದೆ. ಉತ್ತರ ಕೊರಿಯಾವು ಪತ್ತೇದಾರಿ ಉಪಗ್ರಹವನ್ನು ಉಡಾವಣೆ ಮಾಡಿರುವುದು ಇಡೀ ಜಗತ್ತಿಗೆ ಗಂಭೀರ ಸವಾಲಾಗಿದೆ ಎಂದು ಜಪಾನ್ ಟೀಕಿಸಿದ್ದರೆ, ಉತ್ತರ ಕೊರಿಯಾದ ಕ್ರಮವು ದೇಶದ ಮತ್ತು ಈ ವಲಯದ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ದಕ್ಷಿಣ ಕೊರಿಯಾ ಪ್ರತಿಕ್ರಿಯಿಸಿದೆ.