ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಒಲಿಂಪಿಕ್ ವೀಕ್ಷಕ ವಿವರಣೆಕಾರನಿಗೆ ಗೇಟ್ ಪಾಸ್!
PC:x.com/MirrorSport
ಪ್ಯಾರಿಸ್: ಒಲಿಂಪಿಕ್ ಕ್ರೀಡಾಕೂಟದ ಈಜು ಸ್ಪರ್ಧೆ ವೇಳೆ ಮಹಿಳೆಯರ ಬಗ್ಗೆ ಲಿಂಗಭೇದದ ಆಕ್ಷೇಪಾರ್ಹ ಹೇಳಿಕೆ ನೀಡಿದ ವೀಕ್ಷಕ ವಿವರಣೆಕಾರನನ್ನು ಯೂರೊ ಸ್ಪೋರ್ಟ್ಸ್ ವಜಾಗೊಳಿಸಿದೆ.
ಆಸ್ಟ್ರೇಲಿಯಾದ ಈಜುಗಾರ್ತಿಯರ ತಂಡ ಮಹಿಳೆಯರ 4*100 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಶನಿವಾರ ಚಿನ್ನ ಗೆದ್ದ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರ ಬಾಬ್ ಬಲ್ಲಾರ್ಡ್ ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಈ ಕುರಿತ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, "ಇದೀಗ ಮಹಿಳೆಯರ ಸ್ಪರ್ಧೆ ಮುಗಿದಿದೆ. ಮಹಿಳೆಯರು ಹೇಗಿರುತ್ತಾರೆ ಎನ್ನುವುದು ನಿಮಗೆ ಗೊತ್ತು. ಸುತ್ತಾಡುತ್ತಾ, ಮೇಕಪ್ ಮಾಡುತ್ತಿರುತ್ತಾರೆ" ಎಂದು ಬಾಬ್ ಬಲ್ಲಾರ್ಡ್ ಹೇಳುತ್ತಿರುವುದು ಕೇಳಿಬರುತ್ತಿದೆ.
ಸಹ ವೀಕ್ಷಕ ವಿವರಣೆಗಾರರಾಗಿದ್ದ ಲಿಝೀ ಸೈಮಂಡ್ಸ್ ಇದನ್ನು ಅವಹೇಳನಕಾರಿ ಎಂದು ಆಕ್ಷೇಪಿಸಿದ್ದರು. "ನಿನ್ನೆ ರಾತ್ರಿ ಒಲಿಂಪಿಕ್ಸ್ ನೇರಪ್ರಸಾರದ ಕವರೇಜ್ ವೇಳೆ ಯೂರೋಸ್ಪೋರ್ಟ್ಸ್ ನ ವೀಕ್ಷಕ ವಿವರಣೆಗಾರ ಅಸಮಂಜಸ ಹೇಳಿಕೆ ನೀಡಿದ್ದಾರೆ" ಎಂದು ಯೂರೊ ಸ್ಪೋರ್ಟ್ಸ್ ಹೇಳಿಕೆ ನೀಡಿದೆ. ಇದನ್ನು ಕೊನೆಗೊಳಿಸುವ ಉದ್ದೇಶದಿಂದ ಅವರನ್ನು ವೀಕ್ಷಕ ವಿವರಣೆ ತಂಡದಿಂದ ತಕ್ಷಣವೇ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಬಲ್ಲಾರ್ಡ್ ಅವರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.