ಸುಚಿರ್ ಬಾಲಾಜಿ ಅವರ ಅಕಾಲಿಕ ಸಾವಿನ ಕುರಿತು ಕೊನೆಗೂ ಮೌನ ಮುರಿದ OPEN AI

ಸುಚಿರ್ ಬಾಲಾಜಿ | PC : Suchir Balaji/LinkedIn
ವಾಶಿಂಗ್ಟನ್ : ಭಾರತೀಯ ಮೂಲದ ಅಮೆರಿಕದ ಟೆಕ್ಕಿ ಸುಚಿರ್ ಬಾಲಾಜಿ ಅವರ ಅಕಾಲಿಕ ಮರಣ ನೋವು ತಂದಿದೆ ಎಂದು ಅಮೆರಿಕ AI ದೈತ್ಯ ಓಪನ್ AI ಪ್ರತಿಕ್ರಿಯಿಸಿದೆ.
ಸುಚಿರ್ ಬಾಲಾಜಿಯವರನ್ನು ಕೊಲೆ ಮಾಡಿರಬಹುದು ಎಂದು ಅವರ ತಾಯಿಯ ಹೇಳಿಕೆಯ ನಡುವೆಯೇ, ಶುಕ್ರವಾರ ಓಪನ್ AI ನಿಂದ ಪ್ರತಿಕ್ರಿಯೆ ಬಂದಿದೆ.
26 ವರ್ಷದ ಸುಚಿರ್ ಬಾಲಾಜಿ ನವೆಂಬರ್ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.ಸ್ಥಳೀಯ ತನಿಖಾಧಿಕಾರಿಗಳು ಇದು ಆತ್ಮಹತ್ಯೆ ಎಂದು ಹೇಳಿ ಪ್ರಕರಣವನ್ನು ಈಗಾಗಲೇ ಮುಕ್ತಾಯಗೊಳಿಸಿದ್ದಾರೆ.
ಸುಚಿರ್ ಅವರ ತಾಯಿ ಪೂರ್ಣಿಮಾ ರಾವ್ ಇತ್ತೀಚೆಗೆ ಅಮೇರಿಕನ್ ನಿರೂಪಕಿ ಟಕರ್ ಕಾರ್ಲ್ಸನ್ ಅವರೊಂದಿಗಿನ ಸಂದರ್ಶನಕ್ಕೆ ಹಾಜರಾಗಿದ್ದರು. ತಮ್ಮ ಸಂದರ್ಶನದಲ್ಲಿ ಅವರು ತಮ್ಮ ಮಗನ ಸಾವಿಗೆ ಚಾಟ್ಜಿಪಿಟಿ ತಯಾರಕರೇ ಕಾರಣ ಎಂದು ಆರೋಪಿಸಿದ್ದರು. ಪ್ರಕರಣದ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತನಿಖೆಗೆ ಒತ್ತಾಯಿಸಿದ್ದರು.
ಪೂರ್ಣಿಮಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಓಪನ್ಎಐ, ಅಗತ್ಯವಿದ್ದರೆ ಸ್ಯಾನ್ ಫ್ರಾನ್ಸಿಸ್ಕೋದ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದೆ.
"ಸುಚಿರ್ ನಮ್ಮ ತಂಡದ ಅಮೂಲ್ಯ ಸದಸ್ಯರಾಗಿದ್ದರು ಮತ್ತು ಅವರ ನಿಧನದಿಂದ ನಮಗೆ ದುಃಖವಾಗಿದೆ. ಅದು ತುಂಬಲಾರದ ನಷ್ಟ. ಅವರ ಸಾವಿನ ಕುರಿತು ನಾವು ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಅಗತ್ಯವಿದ್ದರೆ ನಮ್ಮ ಸಹಾಯವನ್ನು ನೀಡಲಿದ್ದೇವೆ. ಕಾನೂನಿನೊಂದಿಗೆ ಸಹಕರಿಸಲಿದ್ದೇವೆ " ಎಂದು ಓಪನ್ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ
ಕಂಪೆನಿಯು ಗೌರವದಿಂದ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸುಚಿರ್ ಬಾಲಾಜಿ ಅವರು ಕಾಲೇಜಿನಲ್ಲಿದ್ದಾಗ, ಬಾಲಾಜಿ ಓಪನ್ಎಐ ಮತ್ತು ಸ್ಕೇಲ್ ಎಐನಲ್ಲಿ ಇಂಟರ್ನ್ಶಿಪ್ ಮಾಡಿದ್ದಾರೆಂದು ತಿಳಿದುಬಂದಿದೆ. ಬಾಲಾಜಿ ಕಳೆದ ವರ್ಷ ಆಗಸ್ಟ್ನಲ್ಲಿ ಓಪನ್ಎಐ ಅನ್ನು ತೊರೆಯುವ ಮೂಲಕ AI ದೈತ್ಯದಲ್ಲಿ ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಕೊನೆಗೊಳಿಸಿದ್ದರು.
ಆ ಬಳಿಕ ಅಕ್ಟೋಬರ್ನಲ್ಲಿ, ಅವರು ನ್ಯೂಯಾರ್ಕ್ ಟೈಮ್ಸ್ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಸಮಾಜಕ್ಕೆ ಪ್ರಯೋಜನಕ್ಕಿಂತ ಹೆಚ್ಚು ಹಾನಿ ತರುವ ತಂತ್ರಜ್ಞಾನಗಳಿಗಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು.
ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಓಪನ್ಎಐ ವಿರುದ್ಧ ಸಲ್ಲಿಸಲಾದ ನ್ಯಾಯಾಲಯದ ಅರ್ಜಿಯಲ್ಲಿ ಬಾಲಾಜಿಯ ಹೆಸರೂ ಇದೆ ಎಂದು ವರದಿಯಾಗಿದೆ. ಅದರ ಅತಿದೊಡ್ಡ ಹೂಡಿಕೆದಾರ ಮೈಕ್ರೋಸಾಫ್ಟ್ ಮತ್ತು ಪತ್ರಿಕೆಗಳು ಸೇರಿದಂತೆ ಹಲವಾರು ಸಂಸ್ಥೆಗಳು ಹಕ್ಕುಸ್ವಾಮ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಓಪನ್ಎಐ ವಿರುದ್ಧ ಮೊಕದ್ದಮೆ ಹೂಡಿವೆ.