OpenAi ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಂಸ್ಥೆಯ ಮಾಜಿ ಉದ್ಯೋಗಿ ಸುಚಿರ್ ಬಾಲಾಜಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಸುಚಿರ್ ಬಾಲಾಜಿ (Photo: X)
ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಓಪನ್ ಎಐ (OpenAi) ಕಾರ್ಯಚಟುವಟಿಕೆಗಳು ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದ, ಸಂಸ್ಥೆಯ ಮಾಜಿ ಉದ್ಯೋಗಿ ಸುಚಿರ್ ಬಾಲಾಜಿ ಅವರ ಮೃತದೇಹವು ಸ್ಯಾನ್ ಫ್ರಾನ್ಸಿಸ್ಕೋದ ಅವರ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿದೆ.
26 ವರ್ಷದ ಸುಚಿರ್ ಬಾಲಾಜಿ ಅವರು ನವೆಂಬರ್ 26 ರಂದು ಮೃತಪಟ್ಟಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಓಪನ್ ಎಐ ವಿರುದ್ಧ ಮಾಡಿರುವ ಆರೋಪಗಳಿಂದ ಗಮನ ಸೆಳೆದಿದ್ದ ಸುಚಿರ್ ಬಾಲಾಜಿ ಅವರ ನಿಧನಕ್ಕೆ ಹಲವಾರು ಟೆಕ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಾಲಾಜಿ ಅವರ ಸಾವಿನ ಸುದ್ದಿಗೆ ಉದ್ಯಮಿ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಓಪನ್ ಎಐ ವಿರುದ್ಧ ಮಸ್ಕ್ ಕೂಡಾ ಆರೋಪಗಳನ್ನು ಮಾಡಿದ್ದರು.
ಸಂಸ್ಥೆಯ ಮಾಜಿ ಸಂಶೋಧಕರಾಗಿದ್ದ ಬಾಲಾಜಿ ಅವರು ತಾವು ನ್ಯೂಯಾರ್ಕ್ ಟೈಮ್ಸ್ ಗೆ ಬರೆದ ಲೇಖನದಲ್ಲಿ, ʼಚಾಟ್ಜಿಪಿಟಿಗೆ ತರಬೇತಿ ನೀಡಲು ಓಪನ್ಎಐ ಹಕ್ಕುಸ್ವಾಮ್ಯದ ವಸ್ತುಗಳನ್ನು ಬಳಸುತ್ತಿದೆʼ ಎಂದು ಸಂಸ್ಥೆಯ ವಿರುದ್ಧ ಆರೋಪಿಸಿದ್ದರು. ಆಗಸ್ಟ್ ತಿಂಗಳಲ್ಲಿ ಕಂಪೆನಿಯನ್ನು ತೊರೆದಿದ್ದ ಬಾಲಾಜಿ ಅವರ ಲೇಖನವು ಓಪನ್ ಎಐ ಸಂಸ್ಥೆ ಅಮೇರಿಕಾದ ಕಾಪಿರೈಟ್ಸ್ ನಿಯಮಗಳನ್ನು ಉಲ್ಲಂಘಿಸುತ್ತಿದೆ. ChatGPT ಯಂತಹ ತಂತ್ರಜ್ಞಾನಗಳು ಇಂಟರ್ನೆಟ್ ಅನ್ನು ಹಾನಿಗೊಳಿಸುತ್ತಿವೆ ಎಂದು ಅವರು ಹೇಳಿದ್ದರು.
ಸ್ಥಳ ಮಹಜರು ನಡೆಸಿರುವ ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸರು ಬಾಲಾಜಿ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು, ಅಪರಾಧ ಕೃತ್ಯ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
"ಸಾವಿನ ರೀತಿಯನ್ನು ಆತ್ಮಹತ್ಯೆ ಎಂದು ನಿರ್ಧರಿಸಲಾಗಿದೆ" ಎಂದು ನಗರದ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯ ನಿರ್ದೇಶಕ ಡೇವಿಡ್ ಸೆರಾನೊ ಸೆವೆಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.